ಬಾಲ ವಿವೇಕ : ಪುಟ್ಟ ಪೋರನ ದೊಡ್ಡ ಕನಸುಗಳು

ಮೈಸೂರು ಜಿಲ್ಲೆ ಬನ್ನೂರಿನ ಬಳಿ ಇರುವ ಹನುಮನಾಳು ಎಂಬುದು ಒಂದು ಪುಟ್ಟ ಗ್ರಾಮ. ಆ ಗ್ರಾಮದಲ್ಲಿ ಸೋಮಶೇಖರ ಮತ್ತು ತಾಯಮ್ಮ ಎಂಬ ರೈತ ದಂಪತಿಗಳು ತಮ್ಮ ಮುದ್ದಾದ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಬಂದಿದ್ದು ಬರಲಿ ಭಗವಂತನ ದಯೆ ಇರಲಿ ಎಂದು ಇವರ ಸಂಸಾರ ಚಿಕ್ಕದಾಗಿ, ಚೊಕ್ಕದಾಗಿ ಇತ್ತು. ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ತರಕಾರಿ, ರಾಗಿ, ಭತ್ತ ಹೀಗೆ ಬೆಳೆದಿದ್ದರಲ್ಲಿ ಹೇಗೋ ಹೊಂದಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಪುಟಾಣಿಗಳಾದ ಮಹೇಶ ಮತ್ತು ತಂಗಿ ಮಾನಸ ಬೆಳೆದು ಶಾಲೆಗೆ ಸೇರುವ ವಯಸ್ಸು ಅದಾಗಲೇ ಬಂದಿತ್ತು. ಸೋಮಶೇಖರರವರು ತನ್ನ ಮಗ ಮಹೇಶನಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು ಎಂದು ತಮ್ಮ ಪಕ್ಕದ ಊರಿನ ಬನ್ನೂರಿನ ವಿವೇಕಾನಂದ ಶಾಲೆಗೆ ಎಲ್ ಕೆ ಜಿ ಗೆ ಸೇರಿಸುತ್ತಾರೆ. ಆದರೆ ಮಹೇಶ ಅಲ್ಲಿ ಓದಲು ಇಷ್ಟಪಡುವುದಿಲ್ಲ ಕೊನೆಗೆ ತನ್ನ ಹನುಮನಹಳ್ಳಿಯಲ್ಲಿ ಇದ್ದ ಖಾಸಗಿ ಶಾಲೆಯಾದಂತಹ ಶ್ರೀ ಶಾರದ ಶಿಕ್ಷಣ ಸಂಸ್ಥೆಗೆ ಸೇರುತ್ತಾನೆ.
ಮಹೇಶ ಚಿಕ್ಕಂದಿನಿಂದಲೇ ಬಹಳ ಬುದ್ಧಿವಂತನಾಗಿದ್ದು ಶಿಕ್ಷಕರು ಹೇಳಿದ್ದೆಲ್ಲವನ್ನು ಮಾಡುವಂತಹ ಉತ್ಸಾಹಿ ಬಾಲಕನಾಗಿರುತ್ತಾನೆ. ಇದನ್ನೆಲ್ಲಾ ಗಮನಿಸುತ್ತಿದ್ದ ತನುಜಾ ಎಂಬ ಶಿಕ್ಷಕಿಯು ಆತನಿಗೆ ಬೆಂಬಲವಾಗಿ ನಿಲ್ಲುತ್ತಾರೆ. ಆಕೆ ಎಲ್ಲಾ ಶಿಕ್ಷಕರಿಗಿಂತಲೂ ವಿಶಿಷ್ಟವಾಗಿ ಮಹೇಶನ ಪಾಲಿಗೆ ಒಲಿದಿರುತ್ತಾರೆ. ಆ ಶಿಕ್ಷಕಿಯು ಸ್ವಾಮಿ ವಿವೇಕಾನಂದರ ಪರಮ ಭಕ್ತರಾಗಿದ್ದು, ದೇಶದ ಮತ್ತು ಭಾಷೆಯ ಬಗ್ಗೆ ಹೆಚ್ಚು ಒಲವನ್ನು ಮೂಡಿಸಿಕೊಂಡಿರುತ್ತಾರೆ ಹಾಗೆಯೇ ತನ್ನ ಎಲ್ಲಾ ಮಕ್ಕಳಿಗೂ ದೇಶಪ್ರೇಮವನ್ನು ಬಿತ್ತುವ ಸಾಹಸಕ್ಕೆ ಮುಂದಾಗಿರುತ್ತಾರೆ. ಅದರಲ್ಲಿ ಮಹೇಶನದೇ ಮೇಲುಗೈ ಎಂದರೆ ತಪ್ಪಾಗಲಾರದು.


ಒಮ್ಮೆ ಹೀಗೆ ಶಿಕ್ಷಕಿಯು ಪಾಠ ಮಾಡುವಾಗ ಭಾರತ ನಮ್ಮ ದೇಶ. ನಮ್ಮ ದೇಶವನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಅದನ್ನು ಭಾರತೀಯರಾದ ನಾವೇ ಕಾಪಾಡಿಕೊಳ್ಳಬೇಕು ಎಂದೆಲ್ಲಾ ಹೇಳುವಾಗ ಆ ಪುಟ್ಟ ಬಾಲಕನ ತಲೆಯಲ್ಲಿ ಒಂದು ಪ್ರಶ್ನೆ ಮೂಡುತ್ತದೆ. ತಕ್ಷಣ ಎದ್ದು ನಿಂತ ಮಹೇಶ ಟೀಚರ್, ಭಾರತ, ಹಾಗೆಂದರೇನು? ಅದು ಹೇಗಿದೆ? ಎಂದೆಲ್ಲಾ ತನ್ನ 1ನೇ ತರಗತಿಯಲ್ಲೇ ಪ್ರಶ್ನಿಸಿದ್ದ. ಆಗ ತಕ್ಷಣ ಶಿಕ್ಷಕಿಯು ಕಪ್ಪು ಹಲಗೆಯ ಮೇಲೆ ಭಾರತದ ಭೂಪಟದ ಚಿತ್ರವನ್ನು ಬಿಡಿಸಿ ಇದೇ ನಮ್ಮ ಭಾರತ ಎಂದು ತಿಳಿಸಿಕೊಟ್ಟರು. ಅಲ್ಲಿಂದ ಶುರುವಾಯಿತು ಮಹೇಶನ ದೇಶಪ್ರೇಮ. ಚಿಕ್ಕ ಬಾಲಕನಾದರೂ ಪಟ್ಟು ಬಿಡದೆ ಭಾರತದ ಚಿತ್ರವನ್ನು ಬಿಡಿಸಬೇಕು ಎಂಬ ಹಟ ತೊಟ್ಟು ತನ್ನ ಅಣ್ಣನ ಪುಸ್ತಕದಲ್ಲಿ ನೋಡಿ ಅಣ್ಣನ ಸಹಾಯವನ್ನೆಲ್ಲ ಪಡೆದು ಭಾರತದ ಭೂಪಟವನ್ನು ತನ್ನ ಪುಟ್ಟ ಕೈಯಲ್ಲಿ ಬಿಡಿಸಿ ಸೈ ಎನಿಸಿಕೊಂಡನು.
ಈತನನ್ನು ಗಮನಿಸಿದ ಶಿಕ್ಷಕಿಯು ಈತನಲ್ಲಿ ಏನೋ ಒಂದು ಮಹಾ ಚೈತನ್ಯವಿದೆ, ಈತನ ಅಂತರಾಳದಲ್ಲಿ ಯಾವುದೋ ಶಕ್ತಿ ಅಡಗಿದೆ ಅದನ್ನು ನನ್ನ ದೇಶವನ್ನು ಉದ್ದರಿಸುವಲ್ಲಿ ಬಳಸಿಕೊಳ್ಳಬೇಕು ಎಂದು ತೀರ್ಮಾನಿಸುತ್ತಾರೆ. ನಂತರ ವಿವೇಕಾನಂದರ ಬಗ್ಗೆ ಭಾಷಣವನ್ನು ಬರೆದು ಕೊಟ್ಟು ಮಾತನಾಡುವ ಕಲೆಯ ಬಗ್ಗೆ ತರಬೇತಿಯನ್ನು ನೀಡುತ್ತಾರೆ ಆಗ ಮಹೇಶನು ಎರಡನೇ ತರಗತಿ. ಆ ಪುಟ್ಟ ಬಾಲಕ ಸೆಪ್ಟೆಂಬರ್ 11ರ ವಿಶ್ವಧರ್ಮ ಸಮ್ಮೇಳನದ ವಿಚಾರವನ್ನು ತೆಗೆದುಕೊಂಡು ಮುದ್ದಾದ ಭಾಷಣ ಮಾಡುತ್ತಾನೆ. ಈ ಪುಟ್ಟ ಪೋರನ ವಾಕ್ಚಾತುರ್ಯಕ್ಕೆ ಅಲ್ಲಿ ನೆರೆದಿದ್ದವರು ಮನಸೋಲದೇ ಇರಲಿಲ್ಲ
ಈತನಲ್ಲಿರುವ ಪ್ರತಿಭೆಯನ್ನು ಹೊರತರಬೇಕೆಂದು ಶಿಕ್ಷಕಿ ತನುಜ ಪಣ ತೊಡುತ್ತಾರೆ. ಹೀಗೆ ಹಲವಾರು ಪುಣ್ಯ ಪುರುಷರ ಕಥೆಗಳನ್ನು ಹೇಳಿಕೊಡುತ್ತಾ, ಆಶ್ರಮ ಮುಂತಾದ ಕಡೆಗಳಲ್ಲಿ ಹಲವಾರು ಪುಸ್ತಕಗಳನ್ನು ತಂದು ಮಹೇಶನಿಗೆ ಓದಲು ಪ್ರೇರೇಪಿಸುತ್ತಾರೆ. ಆದಾಗಲೇ ಮಹೇಶನಿಗೆ ಹತ್ತರ ವಯಸ್ಸು 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುತ್ತಾನೆ.
ಒಂದು ಬಾರಿ ಶಿಕ್ಷಕಿಯು ಮಹೇಶನಿಗೆ ಓದಲು ಪ್ರೇರೇಪಿಸುತ್ತಾ ಹೀಗೆ ಹೇಳುತ್ತಾರೆ ನೋಡು ಮಗು ಮಹೇಶ, ಹಾರಿಕಾ ಮಂಜುನಾಥ್ ಎಂಬ ಮಹಿಳೆ ಐದು ವರ್ಷಗಳಲ್ಲಿ ಎರಡು ಸಾವಿರ ಪುಸ್ತಕಗಳನ್ನು ಓದಿರುತ್ತಾರೆ ನೀನು ಸಹ ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸುಕೋ ಎಂದೆಲ್ಲ ತಿಳಿಸಿಕೊಡುತ್ತಾರೆ.
ಕೇವಲ ಪಠ್ಯಪುಸ್ತಕಗಳನ್ನು ಓದುತ್ತಿದ್ದ ಮಹೇಶ ನನ್ನ ಐದನೇ ತರಗತಿಯಲ್ಲಿ ದಾರ್ಶನಿಕರ, ವಿವೇಕಾನಂದರ, ರಾಮಕೃಷ್ಣ ಪರಮಹಂಸರು, ಶಾರದಾದೇವಿ, ಸಾವರ್ಕರ್ ಮುಂತಾದ ಶ್ರೇಷ್ಠ ಮಹನೀಯರ ಪುಸ್ತಕಗಳನ್ನು ತನ್ನ ಶಿಕ್ಷಕಿಯಿಂದ ಪಡೆದು ಓದಲು ಪ್ರಾರಂಭಿಸುತ್ತಾನೆ. ಮಹೇಶ ತನ್ನ ಓದಿನ ಗೀಳನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಾನೆ.
ಅಲ್ಲದೇ ತನ್ನ ಶಿಕ್ಷಕಿಯೂ ಮೈಸೂರಿನ ರಾಮಕೃಷ್ಣ ಆಶ್ರಮಕ್ಕೆ ಆತನನ್ನು ಕರೆದುಕೊಂಡು ಬಂದು ಸ್ವಾಮೀಜಿಯವರನ್ನು ಪರಿಚಯಿಸಿಕೊಡುತ್ತಾರೆ. ಇನ್ನು ಹೆಚ್ಚಿನ ಪುಸ್ತಕಗಳನ್ನು ಓದಲು ಆತನಿಗೆ ಒಲವನ್ನು ಮೂಡಿಸುತ್ತಾರೆ. ಪುಸ್ತಕಗಳನ್ನು ಓದುವುದಷ್ಟೇ ಅಲ್ಲದೆ ಆ ಪುಸ್ತಕಗಳ ಬಗ್ಗೆ ಕೆಲವೊಂದು ಭಾಷಣಗಳನ್ನು ಬರೆದು ಕೊಟ್ಟು ಆತನಿಗೆ ಅದನ್ನು ನೋಡದೆ ಹೇಳುವಂತಹ ಭಾಷಣ ಕಲೆಯನ್ನು ರೂಢಿಸಿಕೊಡುತ್ತಾರೆ. ಮಹೇಶ ತನ್ನ ಐದನೇ ತರಗತಿಯಲ್ಲಿಯೇ 52 ಪುಸ್ತಕಗಳನ್ನು ಓದಿ ಮುಗಿಸುತ್ತಾನೆ ಮತ್ತು ಹೆಚ್ಚು ಪಾಂಡಿತ್ಯವನ್ನು ಗಳಿಸಿಕೊಳ್ಳುತ್ತಾನೆ. ಇದನ್ನು ತಿಳಿದಂತಹ ತನುಜಾ ಶಿಕ್ಷಕಿಯು ಆತನನ್ನು ಸೂಲಿಬೆಲೆ ಚಕ್ರವರ್ತಿ ಅವರ ಬಳಿ ಕರೆದುಕೊಂಡು ಹೋಗಿ ಈತನ ವಿಚಾರಧಾರೆಗಳನ್ನೆಲ್ಲ ತಿಳಿಸುತ್ತಾರೆ. ಈತನ ಭಾಷಣವನ್ನು ಆಲಿಸಿದಂತಹ ಚಕ್ರವರ್ತಿ ಸೂಲಿಬೆಲೆ ಅವರು ಈ ಪುಟ್ಟ ಬಾಲಕ ಸಾಮಾನ್ಯನಲ್ಲ ಮುಂದೊಂದು ದಿನ ಈತ ಒಬ್ಬ ಅಸಾಮಾನ್ಯ ವ್ಯಕ್ತಿಯಾಗುತ್ತಾನೆ ಎಂದು ಅರಿತು ಮೈಸೂರಿನಿಂದ ಕನ್ಯಾಕುಮಾರಿಯವರಿಗೂ ಕರೆದುಕೊಂಡು ಹೋಗಿ ಮಹೇಶನಿಂದ ಹಲವಾರು ಭಾಷಣಗಳನ್ನು ಕೊಡಿಸುತ್ತಾರೆ. ಸುಮಾರು ಒಂದು ಗಂಟೆಗಳ ನಿರಂತರವಾಗಿ ಮಾತನಾಡುವ ಕಲೆಯನ್ನು ರೂಢಿಸಿಕೊಂಡ ಮಹೇಶ ಕನ್ಯಾಕುಮಾರಿಯಲ್ಲಿ ವಿವೇಕಾನಂದರ ಪ್ರತಿಮೆಯ ಬಳಿ ಪ್ರತಿಜ್ಞೆಯನ್ನು ಮಾಡುತ್ತಾನೆ “ ಭವ್ಯ ಭಾರತವನ್ನು ಸೃಷ್ಟಿಸುವುದೇ ನನ್ನ ಧ್ಯೇಯ” ಎಂದು. ನಂತರ ಮಹೇಶ ಓದುವ ದಾಹವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಾನೆ . ಈತನ ಬೆಳವಣಿಗೆಯನ್ನು ಕಂಡಂತಹ ಮಹೇಶನ ಪೋಷಕರು. ತನ್ನ ಮಗ ಏನೋ ಸಾಧನೆ ಮಾಡುವಲ್ಲಿ ಹೊರಟಿದ್ದಾನೆ ಅವನಿಗೆ ಅಡೆತಡೆ ಮಾಡಬಾರದೆಂದು ತಮಗಾಗದಿದ್ದರೂ ಶಿಕ್ಷಕಿಯು ಕರೆದುಕೊಂಡು ಹೋಗಲು ಅನುಮತಿಯನ್ನು ಕೇಳಿದಾಗಲೆಲ್ಲ ಕಳುಹಿಸಿಕೊಟ್ಟು ಬೆಂಬಲಿಸುತ್ತಾರೆ.
ಅಂದಿನಿಂದ ಶಿಕ್ಷಕಿಯಾಗಿದ್ದ ತನುಜ ಮಾತಾಜಿಯಾಗುತ್ತಾರೆ.
ಈತನ ಬಗ್ಗೆ ತಿಳಿದಂತಹ ಪೂರ್ಣ ಚೇತನ ಶಾಲೆಯ ಸಿ ಇ. ಒ ದರ್ಶನ್ ರಾಜ್ ಒಮ್ಮೆ ಆತನನ್ನು ಭೇಟಿಯಾಗಿ ಆತನ ಮಾತುಗಳನ್ನು ಆಲಿಸುತ್ತಾರೆ. ನಂತರ ಆತನನ್ನು ತಮ್ಮ ಪೂರ್ಣ ಚೇತನ ಶಾಲೆಗೆ ಕರೆದುಕೊಂಡು ಬಂದು ತನ್ನ ಶಿಕ್ಷಕ ವೃಂದಕ್ಕೆಲ್ಲ ಪರಿಚಯಿಸಿ ಆ ಪುಟ್ಟ ಪೋರನ ಭಾಷಣವನ್ನು ಆಲಿಸುವಂತೆ ಮಾಡುತ್ತಾರೆ.
ಅಲ್ಲಿ ಆ ಮಹೇಶನ ಒಂದು ಗಂಟೆಗಳ ಸತತ ಭಾಷಣವನ್ನು ಆಲಿಸಿದಂಥ ಶಿಕ್ಷಕರು ಆತನ ವಯಸ್ಸಿಗೆ ಮೀರಿದ ಜ್ಞಾನವನ್ನು ತಿಳಿದು ನಿಬ್ಬೆರಗಾಗುತ್ತಾರೆ. ಹೀಗೆ ಒಂದೊಂದಾಗಿ ಅವಕಾಶಗಳನ್ನು ಗಳಿಸುತ್ತಾ ಹೋದಂತಹ ಮಹೇಶನ ನಿಲುವು ಬದಲಾಗದಂತೆ ಭವ್ಯ ಭಾರತದ ನಿರ್ಮಾಣದ ಕನಸನ್ನು ಹೊತ್ತು ಸಾಗುತ್ತಿತ್ತು ಬದುಕು.
ಮಾತಾಜಿಯವರಂತೆ ದೇಶ ಭಾಷೆಯ ಬಗ್ಗೆ ಒಲವನ್ನು ಮೂಡಿಸಿಕೊಂಡಿದ್ದ ಸಿ ಇ ಓ ದರ್ಶನ್ ರಾಜ್ ಮತ್ತು CAO ಮಾಧುರ್ಯ ಅವರು ಈತನಿಗೆ ಉಜ್ವಲ ಭವಿಷ್ಯವಿದೆ. ಕಂಡು ಕಾಣರಿಯದ ಅದ್ವಿತೀಯ ಬಾಲಕನಾಗುವ ಎಲ್ಲಾ ಲಕ್ಷಣಗಳು ಈತನಲ್ಲಿವೆ ಎಂದು ಗುರುತಿಸಿ ತಮ್ಮ ಶಾಲೆಗೆ ಈತನನ್ನು ಸೇರಿಸಿಕೊಳ್ಳಲು ಆತನ ತಂದೆ ತಾಯಿ ಗುರುಗಳೆಲ್ಲರನ್ನು ಕೇಳಿಕೊಳ್ಳುತ್ತಾರೆ. ಇದಕ್ಕೆ ಸಮ್ಮತಿ ಸಿಕ್ಕ ನಂತರ ಮಹೇಶನ ವಿದ್ಯಾಭ್ಯಾಸ 6ನೇ ತರಗತಿಯಿಂದ ಪೂರ್ಣ ಚೇತನದಲ್ಲಿ ಪ್ರಾರಂಭವಾಗುತ್ತದೆ.

ಇದು ಮಹೇಶನಿಗೆ ಆತನ ಜೀವನದ ಒಂದು ಹೊಸ ಅಧ್ಯಾಯವು ಹೌದು ಸ್ಥಳವು ಹೌದು. ತನ್ನ ಚಿಕ್ಕಂದಿನ ಗೆಳೆಯರು, ಶಿಕ್ಷಕರು, ಶಾಲೆ, ಮನೆ, ತಂದೆ, ತಾಯಿ, ತಂಗಿ, ತಾನು ಆಡಿ ಬೆಳೆದಂತಹ ಹುಟ್ಟೂರು ಎಲ್ಲವನ್ನು ಬಿಟ್ಟು ಹೊಸ ಪ್ರಪಂಚಕ್ಕೆ ಕಾಲಿಟ್ಟಂತಹ ಮಹೇಶ. ಮೊದಮೊದಲಿಗೆ ಮನದೊಳಗೆ ಮುಜುಗರ, ಬೇಸರ, ನಿರಾಸೆ ಎಲ್ಲವನ್ನು ಅನುಭವಿಸುತ್ತಾನೆ. ಹೊಸ ಜಾಗ, ಹೊಸ ಶಾಲೆ, ತನ್ನವರಿಲ್ಲದ ಈ ಜಾಗದಲ್ಲಿ ಆತ ಹೇಗೆ ಹೊಂದಿಕೊಳ್ಳಬಹುದೆಂಬ ಗೊಂದಲ ಆತನಲ್ಲಿ ಕಾಡುತ್ತದೆ. ಹಾಗೆಯೇ ತಾನು ಹೊಂದಿರುವ
ಗುರಿಯನ್ನು ತಲುಪಲು ಇದು ಉತ್ತಮ ಸ್ಥಳವೇ ಎಂಬುದು ಆತನಲ್ಲಿ ಅನುಮಾನದ ಛಾಯೆಯೊಂದು ಸಹ ಮೂಡುತ್ತದೆ.
ದಿನ ಕಳೆದಂತೆ ಗೆಳೆಯರೊಡನೆ ಬೆರೆಯುತ್ತಾನೆ, ಶಿಕ್ಷಕರೊಂದಿಗೆ ಹೊಂದಿಕೊಳ್ಳುತ್ತಾನೆ. ಪೂರ್ಣ ಚೇತನ ಸಹ ಆತನಿಗೆ ಸಹಕಾರ ವಾಗುವಂತೆ ಬೆಂಬಲ ನೀಡುತ್ತಾ ಹೋಗುತ್ತದೆ.
ಪೂರ್ಣ ಚೇತನ ಶಿಕ್ಷಣ ಪಡೆಯುವ ಶಾಲೆಯಾದರೆ, ಊಟ, ಉಳಿದುಕೊಳ್ಳಲು ಮನೆ, ಆತನಿಗೆ ಅಮ್ಮನಷ್ಟೇ ಪ್ರೀತಿಸುವ, ಸಲಹುವ, ಅವನ ಗುರಿಗೆ ಸಾಕಾರ ವಾಗುವಂತೆ ಮಾಡುವ, ಮಾತಾಜಿಯೊಬ್ಬರ ಪ್ರವೇಶ ಮಹೇಶನ ಜೀವನದಲ್ಲಿ ಉಂಟಾಗುತ್ತದೆ. ಅವರೇ ಶ್ರೀಮತಿ ನೀಲಾ. ಇವರ ಮನೆಯಲ್ಲಿಯೇ ಮಹೇಶನ ಮುಂದಿನ ಜೀವನ ಪ್ರಾರಂಭವಾಗುತ್ತದೆ.
ಶಾಲೆಯಲ್ಲಿದ್ದಂತಹ ಕೃಷಿ, ಭಗವದ್ಗೀತ ಪಠಣ, ಇವೆಲ್ಲವೂ ಆತನಿಗೆ ಒಂದು ರೀತಿಯ ಸ್ಪೂರ್ತಿಯನ್ನು ನೀಡುತ್ತವೆ. ಕ್ರಿಕೆಟ್ ಅಂದರೆ ನಮ್ಮ ಮಹೇಶನಿಗೆ ಎಲ್ಲಿಲ್ಲದ ಅಚ್ಚುಮೆಚ್ಚು, ಮೈದಾನ ಸಿಗದಿದ್ದರೇನು? ಶಿಕ್ಷಕರಿಲ್ಲದ ವೇಳೆ ಗೆಳೆಯರ ಜೊತೆಗೂಡಿ ತನ್ನ ತರಗತಿಯನ್ನೇ ಮೈದಾನ ಮಾಡಿಕೊಂಡು ಕ್ರಿಕೆಟ್ ಆಟವನ್ನು ಪ್ರಾರಂಭಿಸಿಬಿಡುತ್ತಾನೆ. ಇದರಿಂದ ಎಷ್ಟೋ ಬಾರಿ ಶಿಕ್ಷಕರಿಂದ ಬೈಗುಳಗಳನ್ನು ತಿಂದಿದ್ದು ಉಂಟು.
ಹೀಗೆ ಮಹೇಶನ ಆಟ, ತುಂಟಾಟ, ಓದಿನೊಂದಿಗೆ ಜೀವನ ಸಾಗುತ್ತಾ ಹೋಗುತ್ತದೆ. ಆರರಿಂದ ಏಳನೆಯ ತರಗತಿಗೆ ಕಾಲಿಡುತ್ತಾನೆ. ಹೀಗಿರುವಾಗ ಮಹೇಶನ ಗುರಿಗೆ ಸಾಕಾರವಾಗುವಂತೆ ಬಂದಿದ್ದೆ ಪೂರ್ಣ ಚೇತನ ಶಾಲೆಯಲ್ಲಿ ಕೈಗೊಳ್ಳುತ್ತಿದ್ದ ವಿಶ್ವ ದಾಖಲೆಗಳ ಪ್ರಯತ್ನ. ಇದರಲ್ಲಿ ವಯಕ್ತಿಕವಾಗಿಯು ಭಾಗವಹಿಸುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದಕ್ಕೆ ಬೆಂಬಲವಾಗಿ ನಿಂತವರು ಶಾಲೆಯ ನಿರ್ವಹಣಾಧಿಕಾರಿಗಳು ಮತ್ತು ಮಾತಾಜಿ ನೀಲಾರವರು.
ಈ ಸುವರ್ಣ ಅವಕಾಶಕ್ಕೆ ಮಹೇಶನ ಹೆಸರನ್ನು ನೊಂದಾಯಿಸಿಕೊಳ್ಳಲಾಯಿತು. ಹೆಸರನ್ನು ಸೂಚಿಸಲಾಯಿತು. ಇನ್ನು ಬಾಕಿ ಉಳಿದಿರುವುದು ಇದಕ್ಕೆ ತಯಾರಿ ಒಂದೇ. ವಿಶ್ವ ದಾಖಲೆಯ ಪ್ರಯತ್ನದ ವಿಷಯವೇನೆಂದರೆ ಸ್ವಾಮಿ ವಿವೇಕಾನಂದರ ಬಗ್ಗೆ 14 ಗಂಟೆಗಳ ಕಾಲ ಸತತವಾಗಿ ಮಾತನಾಡುವುದಾಗಿತ್ತು.
ಇದಕ್ಕೆ ಛಲ ಮತ್ತು ದೃಢ ಮನಸ್ಸಿನಿಂದ ಮಹೇಶನ ಮನಸ್ಸು ಹಿಗ್ಗಿತ್ತು… ಆದರೆ ಇದೊಂದು ಸಾಮಾನ್ಯದ ಸಂಗತಿಯಾಗಿರಲಿಲ್ಲ. ಇದನ್ನು ಮಾಡಿಯೇ ತೀರುತ್ತೇನೆ ಎಂಬ ಹಠವು ಮಹೇಶನ ಮನದ ಮೂಲೆಯಲ್ಲಿ ಮೂಡಿತ್ತು.
ಇದಾದ ನಂತರ ಬಿಡುವು ಮಾಡಿಕೊಂಡು ವಿವೇಕಾನಂದರ ಪುಸ್ತಕಗಳನ್ನು ಒಂದರ ನಂತರ ಒಂದಾಗಿ ಓದಲು ಪ್ರಾರಂಭಿಸುತ್ತಾನೆ. ಆತನಿಗೆ ಸಹಕಾರ ವಾಗುವಂತೆ ಆತನಿಗೆ ಬೇಕಾದಂತಹ ಪುಸ್ತಕಗಳನ್ನೆಲ್ಲ, ತಂದುಕೊಡುತ್ತಾರೆ. ವಿವೇಕಾನಂದರ ಬಗ್ಗೆ ತಿಳಿದುಕೊಳ್ಳುವುದೊಂದೇ ಮಹೇಶನ ಸದ್ಯದ ಗುರಿಯಾಗಿತ್ತು. ಹಾಗೆಯೇ ಆತ ಚಲ ಬಿಡದೆ ತಿಳಿದುಕೊಳ್ಳುತ್ತಲೇ ಹೋದ,
ಹಾಗೆಯೇ ಇವನ ಚಿಕ್ಕಂದಿನ ಮಾತಾಜಿ ಆದಂತಹ ತನುಜಾ ಕೂಡ ಆಗಿಂದಾಗ್ಗೆ ಬಂದು ಈತನ ಪುಸ್ತಕಗಳ ಓದುವಿಕೆಯ ಬಗ್ಗೆ ಮಾಹಿತಿ ಕಲೆ ಹಾಕುತ್ತಾ ಆತನಿಗೆ ತರಬೇತಿಯನ್ನು ಸಹ ನೀಡಿದರು. ತದನಂತರ ನೀಲಾ ಮಾತಾಜಿ ಅವರು ಪೂರ್ಣ ಪ್ರಮಾಣದ ಸಹಕಾರವನ್ನು ಮಹೇಶನಿಗೆ ನೀಡುತ್ತಾ, ಮಹೇಶನ ಗುರಿಯನ್ನು ಮುಟ್ಟಿಸುವುದೇ ತನ್ನ ಗುರಿ ಎಂದು ಭಾವಿಸಿಕೊಂಡರು. ಈತನಿಗಾಗಿಯೇ ಕೊನೆಯ ಹತ್ತು ಹದಿನೈದು ದಿನಗಳು ತಮ್ಮ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಮೀಸಲಿಟ್ಟರು, ಅಂತೆಯೇ ಈ ವಿಚಾರವಾಗಿ ಹಲವಾರು ಭಾಷಣಗಳ ವಿಡಿಯೋಗಳನ್ನು, ಮಹೇಶನಿಗೆ ತೋರಿಸುತ್ತಾ, ಹೇಗೆಲ್ಲ ಮಾತನಾಡಬೇಕು, ಭಾಷಣ ಕಲೆಯನ್ನು ಹೇಗೆ ರೂಡಿಸಿಕೊಳ್ಳುವುದು? ಎಂದೆಲ್ಲ ಅರಿವನ್ನು ಮೂಡಿಸುತ್ತಾ, ದಾಖಲೆಯ ದಿನಕ್ಕೆ ಬೇಕಾದಂತಹ ಪಿ.ಪಿ.ಟಿ ಮುಂತಾದ ಸಿದ್ಧತೆಗಳನ್ನೆಲ್ಲ ತಯಾರಿ ನಡೆಸುತ್ತಾ ಹೋದರು.
ಈತ ಸುಮಾರು 30 ರಿಂದ 35 ವಿವೇಕಾನಂದರ ಪುಸ್ತಕಗಳನ್ನು ಓದುತ್ತಾ ತಯಾರಿ ನಡೆಸುತ್ತಾನೆ. ಹೀಗೆ ಈತನ ಸತತ ಪ್ರಯತ್ನದ ನಂತರ ಮಹೇಶನ ಕನಸನ್ನು ನನಸಾಗಿಸುವ ದಿನ ಬಂದೇ ಬಿಡುತ್ತದೆ.
ಅಂದು ದಿನಾಂಕ 27-7-24 ಶನಿವಾರ ಬೆಳಗ್ಗೆ 6:30 ಗಂಟೆಯ ಸಮಯ, ಮಹೇಶ ಮೊದಲಿಗೆ ತನ್ನ ಶಾಲೆಯ ಹೃದಯ ಭಾಗದಲ್ಲಿರುವ ಸ್ವಾಮಿ ವಿವೇಕಾನಂದರ ಭಾವಚಿತ್ರದ ಬಳಿ ಬಂದು ತನ್ನ ಆರಾಧ್ಯ ದೈವನಿಗೆ ವಂದಿಸುತ್ತಾನೆ. ಕೆಲವು ಸಮಯ ಧ್ಯಾನಮಗ್ದನಾಗುತ್ತಾನೆ. ಅದಾಗಲೇ ವಿಶ್ವ ದಾಖಲೆಗೆ ಸಂಬಂಧಿಸಿದ ತೀರ್ಪುಗಾರರೆಲ್ಲರೂ ಹಾಜರಾಗಿದ್ದು ಮಹೇಶನಿಗೆ ಪುಷ್ಪಾರ್ಚನೆಯ ಮೂಲಕ ತನ್ನ ದಾಖಲೆಯ ಯಶಸ್ಸನ್ನು ಗಳಿಸಲು ಆಶೀರ್ವಾದವನ್ನು ನೀಡುತ್ತಾರೆ.
ಎಲ್ಲರ ಆಶೀರ್ವಾದದೊಂದಿಗೆ ಬೆಳಗ್ಗೆ 7 ಕ್ಕೆ ಸರಿಯಾಗಿ ಕೈ ಮುಗಿಯುತ್ತ ಮಂತ್ರಘೋಷದೊಂದಿಗೆ ಮಹೇಶ ಸ್ವಾಮಿ ವಿವೇಕಾನಂದರ ಬಗ್ಗೆ ಭಾಷಣವನ್ನು ಪ್ರಾರಂಭಿಸುತ್ತಾನೆ.

ಪ್ರಾರಂಭದಲ್ಲಿ ಈತನ ಮಾತುಗಳು ಅಲ್ಲಿದ್ದವರ ಮೈ ರೋಮಾಂಚನ ವಾಗುವಂತೆ ಮಾಡುತ್ತದೆ, ಭಾವೋದ್ವೇಗದಿಂದ ಎಲ್ಲರೆದೆಯೂ ಒಮ್ಮೆ ಕಂಪಿಸುತ್ತದೆ. ಪಕ್ಕದಲ್ಲಿ ಇಟ್ಟಿದ್ದ ವಿವೇಕಾನಂದರ ಮೂರ್ತಿಯೊಂದು ಮಹೇಶನನ್ನು ತದೇಕ ಚಿತ್ತದಿಂದ ನೋಡುತ್ತಿರುವಂತೆ ಅಲ್ಲಿದ್ದವರಿಗೆ ಭಾಸವಾಗುತ್ತದೆ. ಮಹೇಶನ ಮಾತುಗಳನ್ನು ಆಲಿಸುತ್ತಿದ್ದಂತಹ ಜನರೆಲ್ಲ ಮಂತ್ರಮುಗ್ದರಾಗಿರುತ್ತಾರೆ. ಆತನ ವಾಕ್ಚಾತುರ್ಯ, ಆತನ ಪಾಂಡಿತ್ಯ ಇವೆಲ್ಲವನ್ನೂ ಕಣ್ಣಾರೆ ಕಂಡಂತಹ ಎಲ್ಲರೂ ಆತನಿಗೊಮ್ಮೆ ಸಲ್ಯೂಟ್ ಹೊಡಿಯಬೇಕು ಎಂದುಕೊಳ್ಳುತ್ತಾರೆ.
ಮುಂಜಾನೆಯಿಂದ ರಾತ್ರಿಯವರೆಗೆ ಸತತವಾಗಿ ಎಡೆಬಿಡದೆ ತನ್ನ ಜ್ಞಾನ ಮಂದಿರದಲ್ಲಿ ತುಂಬಿಸಿಕೊಂಡಿದ್ದ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಎಳೆ ಎಳೆಯಾಗಿ ಬಿತ್ತರಿಸುತ್ತಾನೆ. ವಿವೇಕಾನಂದರ ಜನನ, ಬಾಲ್ಯ, ಅವರು ನಡೆದು ಬಂದ ದಾರಿ, ಇತರರೊಂದಿಗೆ ಹೊಂದಿದ್ದ ಒಡನಾಟ, ಎಲ್ಲರೊಂದಿಗೂ ಬೆರೆಯುತ್ತಿದ್ದ ಸನ್ನಿವೇಶಗಳನ್ನೆಲ್ಲ ಕಥೆಯ ರೂಪದಲ್ಲಿ ಹೆಣಿದು ಕೇಳುಗರಿಗೆ ಎಲ್ಲಿಯೂ ಬೇಸರವಾಗದಂತೆ, ಮುಂದೇನು ಎಂಬ ಕುತೂಹಲವನ್ನು ಮೂಡಿಸುವಂತಹ ಸನ್ನಿವೇಶವನ್ನು ಸೃಷ್ಟಿ ಮಾಡಿತ್ತು.
ಒಮ್ಮೊಮ್ಮೆ ಅಲ್ಲಿ ನೆರದಿದ್ದವರಿಗೆ ಸ್ವಾಮಿ ವಿವೇಕಾನಂದರೇ ಈತನ ಮೈಮೇಲೆ ಅವತರಿಸಿ ಬಂದಿರುವರೇನೋ ಎಂಬಂತೆ ಭಾಸವಾಗುತ್ತಿತ್ತು. ಮತ್ತೊಮ್ಮೆ ತನ್ನ ಬದಲಿಗೆ ಈತನನ್ನೇ ರುವಾರಿಯಾಗಿ ಕಳುಹಿಸಿದರೆನೋ ಎನ್ನುವಷ್ಟರ ಮಟ್ಟಿಗೆ ಈತನ ಭಾಷಣ ಎಲ್ಲರ ಎದೆಯನ್ನೊಮ್ಮೆ ಕಂಪಿಸಿತ್ತು.. ಹೀಗೆ ವಿಚಾರಧಾರೆಯೊಂದಿಗೆ ಸಾಗಿದ ಭಾಷಣ ಮುಗಿಸುವ ಗಳಿಗೆ ಬಂದೇ ಬಿಟ್ಟಿತ್ತು. ಆ ಕ್ಷಣ ಅಲ್ಲಿದ್ದವರ ಮುಖಗಳನ್ನುೊಮ್ಮೆ ನೋಡಬೇಕಿತ್ತು.
ಆ ಕ್ಷಣ ಎಲ್ಲರ ದುಃಖ ಇಮ್ಮಡಿಯಾಗಿ ಬಿಕ್ಕಿ ಬಿಕ್ಕಿ ಅಳುವ ಹಂತಕ್ಕೆ ದಾಟಿತ್ತು. ಇನ್ನು ಕೆಲವರ ಕಣ್ಣಲ್ಲಿ ಕಣ್ಣೀರು ಧಾರಾಕಾರವಾಗಿ ಸುರಿದಿತ್ತು. ಇದೊಂದು ದುಃಖವಲ್ಲ, ಇದೊಂದು ಕೇವಲ ಆನಂದ ಭಾಷ್ಪವೂ ಅಲ್ಲ, ಇದು ಜೀವನದ ಸಾಕ್ಷಾತ್ಕಾರವಾಗಿತ್ತು, ಇದೊಂದು ಭಾವನೆಗಳ ಸಮಾಗಮವಾಗಿತ್ತು, ಭವ್ಯ ಭಾರತ ನಿರ್ಮಾಣದ ಮಹೇಶನ ಕನಸಿನ ಮುನ್ನುಡಿಯಾಗಿತ್ತು, ಇದು ಬಾಲ ಮಹೇಶ, ಬಾಲ ವಿವೇಕನಾಗುವ ಸಂದರ್ಭವವಾಗಿತ್ತು, ಏಳಿ, ಎದ್ದೇಳಿ ಎಚ್ಚರಗೊಳ್ಳಿ ನಾನು ಮತ್ತೆ ಹುಟ್ಟಿ ಬಂದಿದ್ದೇನೆ ಎಂದು ವಿವೇಕಾನಂದರು ಎಲ್ಲರನ್ನು ಎಚ್ಚರಿಸುವಂತೆ ಕಾಣತೊಡಗಿತ್ತು.
ಆ ಕ್ಷಣ ಆನಂದಮಯ, ಆ ಕ್ಷಣ ಎಲ್ಲರೂ ತಮ್ಮಯ, ಮಹೇಶನು ಆ ಕ್ಷಣದಲ್ಲಿ ತನ್ನ ತನುಜ ಮಾತಾಜಿ, ನೀಲಾ ಮಾತಾಜಿ, ಮಾಧುರ್ಯ ಮಾತಾಜಿ, ದರ್ಶನ್ ಗುರೂಜಿ ಇವರೆಲ್ಲರ ಸಹಕಾರವನ್ನು ನೆನೆದಂತಹ ಕ್ಷಣ ವರ್ಣನಾತೀತ, ಇದು ಕೇವಲ ವರ್ಣನೆಗೆ ನಿಲುಕದೇ ಅನುಭವದ ಸಾರವಾಗಷ್ಟೇ ಉಳಿದಿತ್ತು. ತನ್ನ ಬಳಿ ಬಂದಾಗ ಒಂದು ಗಂಟೆಗೆ ಸೀಮಿತವಾಗಿದ್ದ ಈತನ ಭಾಷಣ ಕಲೆಯು ಸತತವಾಗಿ 14 ಗಂಟೆಗಳ ಅವಧಿಗೆ ಏರಿದ ಪರಿಯನ್ನು ಕಂಡು ಪೂರ್ಣಚೇತನ ತನ್ನ ಮಡಿಲಿನ ಈ ಕಂದಮ್ಮನ ಸಾಧನೆಯನ್ನು ಕೊಂಡಾಡಿತ್ತು
ಸತತ 14 ಗಂಟೆ 2 ನಿಮಿಷಗಳ ಕಾಲ ವಿವೇಕಾನಂದರ ಬಗ್ಗೆ ಭಾಷಣವನ್ನು ಮಾಡಿದಂತಹ ಪರಿಯನ್ನು ಅಂದಿನ ಎಲೈಟ್ ಕಂಪನಿಯ ಸಿ ಇ ಒ ಆದಂತಹ ಅಮಿತ್ ಹಿಂಗೋರಾಣಿ ಅವರೇ ಈ ಪುಟ್ಟ ಬಾಲಕನ ಅಪ್ರತಿಮ ಪಾಂಡಿತ್ಯಕ್ಕೆ ತಲೆಬಾಗಿದರು.
ಇನ್ನು ಮುಂದೆ ಆತನೇ ನಮ್ಮ ಗುರುವೆಂದು ಗುರುವೃಂದವೆಲ್ಲ ಶ್ಲಾಘಿಸಿ ಕೈಮುಗಿದ ಕ್ಷಣ ವಿವೇಕಾನಂದರು ಕಂಡ ಕನಸಿನ ಅವತಾರ ಪುರುಷನು ಈತನೇ ಇರಬೇಕು ಎನ್ನುವಂತೆ ಭಾಸವಾಯಿತು.

ಹೀಗೆ ಹನುಮನಾಳು ಮಹೇಶ ಎಂಬ ಪುಟ್ಟ ಪೋರ.. ತನ್ನ 12ನೇ ವಯಸ್ಸಿಗೆ ವಿಶ್ವ ದಾಖಲೆಯನ್ನು ನಿರ್ಮಿಸಿ ಸಾಧನೆಗೈದನು.
ಇದು ಇಷ್ಟಕ್ಕೆ ನಿಲ್ಲದೇ ಈತನ ಭವ್ಯ ಭಾರತ ನಿರ್ಮಾಣದ ಕನಸು ನೆನಸಾಗಬೇಕು. ಹಾಗೆ ಇವನು ಸೈನ್ಯಕ್ಕೆ ಸೇರಿ, ಸೂಲಿ ಬೆಲೆ ಚಕ್ರವರ್ತಿಯಂತೆ ಒಂದು ತಂಡವನ್ನು ಕಟ್ಟಿ, ತನ್ನೆಲ್ಲ ಪಾಂಡಿತ್ಯವನ್ನು ಇತರರಿಗೆ ತಿಳಿಸುವ ಮತ್ತು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಅರಿವನ್ನು ಮೂಡಿಸುವ ಮತ್ತು ಭಾರತ ಮಾತೆಯ ಸೇವೇಗೈಯುವ ಆಸೆಯೊಂದನ್ನು ಹೊತ್ತಿದ್ದಾನೆ. ಇದರೊಂದಿಗೆ ಪರಮ ವೀರ ಚಕ್ರ ಮತ್ತು ಭಾರತರತ್ನ ಪ್ರಶಸ್ತಿಗೆ ಭಾಜನನಾಗುವ ದಿಟ್ಟ ಹೆಜ್ಜೆಯನ್ನು ಹೊತ್ತಿದ್ದಾನೆ.

ಒಟ್ಟಾರೆಯಾಗಿ ಭವ್ಯ ಭಾರತ ನಿರ್ಮಾಣದ ಈತನ ಗುರಿಗೆ ಸಾಕಾರ ವಾಗುವಂತೆ ನಾವೆಲ್ಲರೂ ಬೆಂಬಲಿಸೋಣ. ಈತನೇ ಬಾಲ ವಿವೇಕನಾಗಿ ಮತ್ತೆ ಹುಟ್ಟಿರುವಾಗ ಆತನ ಕೆಲಸಗಳನ್ನು ಒಟ್ಟಾಗಿ ನಿಂತು ಶ್ಲಾಘಿಸೋಣ.