“ಸಾಧನೆಯ ರಥ ಸೃಷ್ಟಿಸಿಯೇ ಬಿಟ್ಟಿತು ಸಂಚಲನದ ಪಥ”
“ಶಕ್ತನಾದರೆ ನೆಂಟರೆಲ್ಲ ಹಿತರು ಅಶಕ್ತನಾದರೆ ಆಪ್ತ ಜನರೇ ವೈರಿಗಳು” – ಪುರಂದರದಾಸರ ಈ ಅಮೃತವಾಣಿಯಂತೆ ನಮ್ಮಲ್ಲಿರುವ ಅಸಾಧಾರಣ ಪ್ರತಿಭೆಯು ದೈವದತ್ತ ಕೊಡುಗೆ. ಇದನ್ನು ಓರೆಗಚ್ಚಿದಾಗ ಮಾತ್ರ ಶ್ರೀಗಂಧದ ಕೊರಡನ್ನು ಕಲ್ಲಿನ ಮೇಲೆ ತೇದಾಗ ಬರುವ ಸುಗಂಧದಂತೆ ಆ ಪರಿಸರದಲ್ಲಿರುವ ಸಕಲ ಜೀವರಾಶಿಗಳ ಜ್ಞಾನೇಂದ್ರಿಯವನ್ನು ಪ್ರಚೋದಿಸುವಂತಾಗುತ್ತದೆ. ಮಕ್ಕಳಿಗೆ ಬಾಲ್ಯದಲ್ಲಿ ಸೂಕ್ತ ಮಾರ್ಗದರ್ಶನವನ್ನು ನೀಡಿದಾಗ, ಅಸಾಧ್ಯವಾದದ್ದನ್ನು ಸಾಧ್ಯವಾಗಿಸುತ್ತಾರೆ. ಮಗುವಿನ ಕಲಿಕೆಗೆ ಮನೆ, ಶಾಲೆ, ಸ್ನೇಹಬಳಗ ಹಾಗೂ ತನ್ನ ಸುತ್ತಲ ಪರಿಸರವು ತುಂಬಾ ಸಹಕರಿಸುತ್ತಿರುತ್ತವೆ. ಆದರೆ ತಾನು ಏನನ್ನು ಕಲಿಯುತ್ತಿರುತ್ತೇನೆ ಎಂಬ ಅರಿವಿನ ಕೊರತೆ ಮಗುವಿಗೆ ಇರುತ್ತದೆ ಹಾಗೆ ಅದರ ಉಪಯೋಗಗಳ ಜ್ಞಾನವಂತೂ ಶೂನ್ಯಮಯ! ಇತ್ತೀಚೆಗೆ ಮಾಧ್ಯಮಗಳ ಪ್ರಭಾವವಂತೂ ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿರುತ್ತವೆ. ಇಂತಹ ಸನ್ನಿವೇಶಗಳಲ್ಲಂತೂ ಶಿಕ್ಷಣ ತಜ್ಞರು ಮಕ್ಕಳ ಸರ್ವತೋಮುಖ ವಿಕಾಸಕ್ಕೆ ಸೂಕ್ತ ಭೂಮಿಕೆಯನ್ನು ಸಜ್ಜುಗೊಳಿಸಬೇಕಾದ ಅನಿವಾರ್ಯತೆಯಿದೆ. ಮಕ್ಕಳ ಅಸಾಧಾರಣ ಪ್ರತಿಭೆಗಳನ್ನು ಪ್ರದರ್ಶಿಸಲು ರಂಗಸಜ್ಜಿಕೆಯನ್ನು ಏರ್ಪಡಿಸುವ ಧುರೀಣರ ಅವಶ್ಯಕತೆಯಂತೂ ನಭೋಮಂಡಲಕ್ಕೆ ಚಂದ್ರಾರ್ಕರಂತೆ ಪ್ರಜ್ಞಾವಂತ, ಕರ್ತವ್ಯನಿಷ್ಠ, ಸುಖ-ದುಃಖಗಳನ್ನು ಸಮಸ್ಥಿತಿಯಲ್ಲಿ ಕಾಣುವ ಸ್ಥಿತಪ್ರಜ್ಞರು ಇಂದಿನ ಪ್ರಪಂಚಕ್ಕೆ ತೀರಾ ಅನಿವಾರ್ಯ. ಈ ಅನಿವಾರ್ಯತೆಯಲ್ಲಿ ಅಳಿಲು ಸೇವೆಯನ್ನು ಮಾಡಲು ಹೊರಟಿರುವ 21ನೇ ಶತಮಾನದ ಭಾರತೀಯ ಶಾಲೆಯಾಗಿ ಪೂರ್ಣ ಚೇತನ ಪಬ್ಲಿಕ್ ಶಾಲೆಯು ಹೊರಹೊಮ್ಮುತ್ತಿರುವುದು ಧ್ರುವತಾರೆಯಂತಿದೆ. ಇಲ್ಲಿ ಮಕ್ಕಳ ಕಲಿಕೆಯು ಮುಕ್ತ ಹಾಗೂ ಸರ್ವಸ್ವತಂತ್ರ ಋಷ್ಯಾಶ್ರಮದ ಅನುಭವವಂತೂ ಪಂಚೇಂದ್ರಿಯ ಕೋಶಗಳನ್ನು ಮಂತ್ರ ಮುಗ್ಧರನ್ನಾಗಿಸುತ್ತಿರುವುದು ಬಲುಸೋಜಿಗ. ತಂತ್ರಜ್ಞಾನವನ್ನು ಎಳೆಯ ವಯಸ್ಸಿನಲ್ಲಿ ನಮ್ಮ ಶಾಲಾ ಮಕ್ಕಳು ಎಳೆಎಳೆಯಾಗಿ ಬಿಡಿಸಿ ಭಾರತದ ಹಳ್ಳಿಗಳಲ್ಲಿನ ಮೂಲಭೂತ ಸಮಸ್ಯೆಗಳಿಗೆ ಸೆಡ್ಡು ಹೊಡೆಯುತ್ತ, ನಗರದ ಸೌಲಭ್ಯಗಳನ್ನು ಹಳ್ಳಿಗರಿಗೆ ಕೈಗೆಟಕುವಂತೆ ಮಾಡಿದಂತ ಪರಿ ಅಗಣಿತ, ಅದ್ಭುತ, ಅಪ್ರಮೇಯ! ಅಭಿಯಂತರರ ಜಾಗತಿಕ ಜಾಗರಣೆ ಜಗತ್ತಿಗೆ ಮುಂಗಾಕಾಣ್ಕೆಯಾಯಿತು. ಅಂದು ಬ್ರಿಟಿಷರು ತಮ್ಮ ದಬ್ಬಾಳಿಕೆಯುಕ್ತ ದೌರ್ಜನ್ಯದಿಂದ ಸೂರ್ಯ ಮುಳುಗದ ನಾಡಾಗಿಸಿಕೊಂಡಿದ್ದರು. ಇಂದು ಪೂರ್ಣ ಚೇತನ ಸಪರಿವಾರ ಕುಟುಂಬದ ಭೌತಿಕ, ಬೌದ್ಧಿಕ, ರಾಚನಿಕ ನವರಸಗಳ ಪಾರಮ್ಯದ ಸದ್ಬಳಕೆಯಿಂದ ಜಾಗತಿಕ ಮಟ್ಟದಲ್ಲಿ ಸೂರ್ಯ ಮುಳುಗದ ನಾಡಾಗಿ ಭಾರತ ಮಾತೆಯು ರಾರಾಜಿಸುವಂತಾಗಿ ಇತಿಹಾಸವನ್ನು ಸೃಷ್ಟಿಸುತ್ತಿದೆ ಎಂಬ ಮಾತು ಪ್ರತಿಯೊಬ್ಬ ಭಾರತೀಯನು ಎದೆಯುಬ್ಬಿಸಿ ಹೇಳುವಂತಾಗಿದೆ.
ಮಕ್ಕಳ ಮುಗ್ದ ಮನಸ್ಸನ್ನು ಸನ್ನಿವೇಶಗಳಿಗನುಸಾರ ಪೋಷಿಸಿದಾಗ ಉತ್ತಮ ಕಲಿಕಾ ಫಲ ಪುಷ್ಪವೃಷ್ಠಿಯಾಗುತ್ತದೆ. ಎಂಬ ಮಾತು ಅಕ್ಷರಶಃ ಸತ್ಯ. ನಮ್ಮ ಎಳೆಯರ- ಹದಿಹರೆಯದ ಮಕ್ಕಳ ಕೂಟ ಶತಕಗಳ ಗಡಿದಾಟಿ ಸಾಸಿರದ ಹೊಸ್ಥಿಲುಗಳನ್ನು ಮೆಟ್ಟುತ್ತಾ ಸ್ವರಚಿತ ಕಥೆಗಳನ್ನು ರಚಿಸಿ ದೇಶವಿದೇಶಗಳ ಪ್ರತಿಭಾನ್ವಿತ ಮೌಲ್ಯಮಾಪಕರ ಮುಂದೆ ಭಯ, ಹಿಂಜರಿಕೆ, ನಿರರ್ಗಳತೆಯ ಧ್ವನಿ ಏರಿಳಿತಗಳ ತಂತಿ ಮೀಟುತ್ತ ಸಾಧನೆಯ ಮುಕುಟವನ್ನು ಮುಡಿಗೇರಿಸಿಕೊಂಡೇ ಬಿಟ್ಟರು! ಈ ಸನ್ನಿವೇಶಕ್ಕೆ ಹಿರಿಯರ ಮಾತೊಂದು ನಮಗೆ ನೆನಪಾಗುತ್ತಿದೆ “ಪುಸ್ತಕದ ಬದನೆ ಪುಸ್ತಕಕ್ಕಷ್ಟೇ ಸೀಮಿತವಾಗಿರದೆ ಸಾಂಬಾರಿಗೆ ಬರುವಂತಾಗಬೇಕು” ಎಂಬ ಮಾತಿನ ಸಾರದಂತೆ ಪ್ರಪಂಚದ ಬಾಲಪ್ರತಿಭೆಗಳ ಕೋಶ ರಚನೆಯು ವಿಶ್ವದ ಪ್ರತಿಷ್ಠಿತ ಗ್ರಂಥಾಲಯಗಳಲ್ಲಿ ಲೀನವಾಗುತ್ತಿರುವುದೆಂದರೆ ಅದು ಸಾಮಾನ್ಯ ಸಂಗತಿಯೇ? ಭಾರತೀಯ ಪ್ರತಿಭೆಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತವಂತೆ ನಿರ್ಮಾಣವಾಗುತ್ತಿರುವುದು ೨೧ನೇ ಶತಮಾನದ ಭಾರತೀಯ ಶಾಲೆಯಾಗಿ ಹೊರಹುಮ್ಮುತ್ತಿರುವ ಪೂರ್ಣ ಚೇತನ ಪಬ್ಲಿಕ್ ಶಾಲೆಯ ತರಗತಿಯ ಕೋಣೆಗಳಲ್ಲಿ ಎಂದರೆ ಅತಿಶಯೋಕ್ತಿಯಾಗಲಾರದು!

ಭಾರತೀಯ ಸನಾತನತೆಯ ಗರ್ಭದಲ್ಲಿ ಸಪ್ತರ್ಷಿಗಳ ಜ್ಞಾನ, ವೇದ, ಉಪನಿಷತ್ತುಗಳು, ರಾಮಾಯಣ, ಮಹಾಭಾರತ ಭಕ್ತಿಪಂಥ, ವಚನಗಳು, ದಾಸವಾಣಿ ಹೀಗೆ ಅನಂತ ಜ್ಞಾನ ರಾಶಿಯ ಜೊತೆಗೆ ವೈಜ್ಞಾನಿಕ, ವೈದ್ಯಕೀಯ, ಆರ್ಥಿಕ, ರಾಜಕೀಯ ಸ್ಥಲಗಳು, ಶಂಕರ, ಮಧ್ವ, ರಮಾನುಜ, ಬಸವಣ್ಣ, ಬುದ್ಧ, ಮಹಾವೀರ, ಸಂತ ಶಿಶುನಾಳ ಹೀಗೆ ಮಹಾನ್ ಸಾಧು ಸತ್ಪುರುಷರ ತವರೂರು. ಭರತ, ಅಶೋಕ, ಕೌಟಿಲ್ಯನಂತಹ ಮಹಾನ್ ರಾಜಕೀಯ ಧುರೀಣರ ರಾಶಿಯೇ ನಮ್ಮಲ್ಲಿದ್ದು ಈ ಎಲ್ಲಾ ಪೂರ್ವಿಕರ ವಂಶವಾಹಿನಿ ನಮ್ಮಲ್ಲಿ ಹುದುಗಿರುವಾಗ, ನಮ್ಮ ಬಾಲ ಪ್ರತಿಭೆಗಳ ಹೃನ್ಮನಯುಕ್ತ ಕಂಠದಿಂದ ಭಗವದ್ಗೀತೆಯ ಪಾರಾಯಣ ಸುಧೀರ್ಘ 14 ಗಂಟೆಗಳಲ್ಲಿ ಅದ್ಭುತ! ಅಸಾಮಾನ್ಯ. ಈ ಘಟನೆಯನ್ನು ಸಾಕ್ಷೀಕರಿಸಿದ ಬೌದ್ಧಿಕ ಪ್ರತಿಭೆಗಳ ಕಣ್ಣಂಚಲ್ಲಿ ನೀರು ಅವರಿಗರಿವಿಲ್ಲದಂತೆ ಅಚ್ಚರಿಯ, ಸೋಜಿಗದ ಆನಂದಬಾಷ್ಪ ಕಾವೇರಿಯಾಯಿತು.
“ವಿದ್ಯೆ ಸಾಧಕನ ಸ್ವತ್ತೇ ವಿನಃ ಸೋಮಾರಿಯ ಸ್ವತ್ತಲ್ಲ” ಎಂಬ ಗುರುವಾಣಿಯಂತೆ ನಮ್ಮ ಬಾಲ ಪ್ರತಿಭೆಯಾದ ಮಹೇಶ್ ಕುಮಾರ್ ಹೆಚ್.ಎಸ್. ತನ್ನ ವಯೋಮಾನಕ್ಕೆ ಮೀರಿದ, ಯಾರೂ ಸರಿಗಟ್ಟಲಾಗದ ಸಾಧನೆಯನ್ನು ಮಾಡಿ ಧ್ರುವತಾರೆಯಂತೆ ಮಿನುಗುತ್ತಿದ್ದಾನೆ. ಕಾಲಕಾಲಕ್ಕೆ ಈ ಭರತ ಖಂಡದಲ್ಲಿ ಧರ್ಮವನ್ನು ರಕ್ಷಿಸಲು ಅವತಾರ ಪುರುಷರು ಜನ್ಮವೆತ್ತುತ್ತಿರುತ್ತಾರೆ. ಸರ್ವತ್ರ ಸಕಲ ಜೀವರಾಶಿಗಳಿಗೆ ಕೇಡನ್ನು ಬಯಸದೆ ಸೂಕ್ತ ಮಾರ್ಗದರ್ಶನ ನೀಡಿ ಮನುಕುಲಕ್ಕೆ ಭದ್ರ ಬುನಾದಿ ಹಾಕಿ, ಅಲ್ಪಾಯುಷಿಗಳಾಗಿ ಕಾರಣಿಕ ಪುರುಷದ್ವಯರಾದ ರಾಮಕೃಷ್ಣಪರಮಹಂಸರು, ಸ್ವಾಮಿ ವಿವೇಕಾನಂದರು ಹಾಗೂ ಶಾರದಾ ಮಾತೆಯಾರನ್ನೊಡಗೂಡಿದ ಜೀವನ ಸಾಧನೆಯುಕ್ತ ಸಾರ್ಥಕತೆಯನ್ನು ಎಳೆಎಳೆಯಾಗಿ ಬಿಡಿಸಿ ಜ್ಞಾನರಸದೂಟವನ್ನು ಉಣಿಸಲು ಆತ ಮಾಡಿದ ಪ್ರಯತ್ನಕ್ಕೆ ಸರ್ವರೂ ಕಂಬನಿ ಮಿಡಿಯುವಂತಾಯಿತು. ಆತನಿಗೆ ಜನ್ಮ ನೀಡಿದ ಪೂರ್ವಾಶ್ರಮದ ಮಾತಾಪಿತರು, ಆತನನ್ನು ಪೋಷಿಸಿ, ಜ್ಞಾನದಾಹವನ್ನು ನೀಗಿಸುತ್ತಿರುವ ಸರ್ವರ ಅಡಿದಾವರಗಳಿಗೆ ಭಕ್ತಿ ಪೂರ್ವಕ ಪ್ರಣಾಮಗಳನ್ನು ಸಲ್ಲಿಸೋಣ.

ಕಣ್ಣಿದ್ದು ಕುರುಡರಂತೆ ಜೀವಿಸುತ್ತಿರುವ, ನೋಡು ನೋಡುತ್ತಿದ್ದಂತೆ ಕಾಮನಬಿಲ್ಲುಗಳ ಬಣ್ಣಗಳನ್ನು ಕ್ರಮವರಿತು ಹೇಳಲು ಹಿಂಜರಿಯುವ ವಾಸ್ತವ ಸನ್ನಿವೇಶದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಪರದೆಯಲ್ಲಿ ಮೂಡುವ ಬಣ್ಣಗಳನ್ನು ಗುರುತಿಸುವುದೆಂದರೆ ಅದ್ಭುತ, ಅಗಣಿತ, ಸೋಜಿಗವೇ ನಮ್ಮ ಶಾಲೆಯ ಮೂರನೇ ತರಗತಿಯ ಅಸ್ಮಿ.ಎ.ಭಾರದ್ವಾಜ್ ಮಾಡಿದ ಸಾಧನೆ ಹಿರಿಯರಾದ ನಮಗೆ ಬಾಲ್ಯದಲ್ಲಿ ನಾವೇನು ಮಾಡುತ್ತಿದ್ದೆವು? ನಮಗೆ ಎಂತಹ ಶಿಕ್ಷಣ ಸಿಗುತ್ತಿತ್ತು? ನಾವೇನನ್ನು ಮರೆತೆವು? ನಮ್ಮ ಜವಾಬ್ದಾರಿಯನ್ನೇಕೆ ನಾವು ಸರಿಯಾಗಿ ನಿರ್ವಹಿಸಲಿಲ್ಲ? ಎಂಬ ಅಸಂಖ್ಯ ಪ್ರಶ್ನೆಗಳು ಬಲಾಕ ಪಕ್ಷಿಯಂತೆ ಕಾಡುತ್ತಿವೆ.

ಮತ್ತೋರ್ವ ಬಾಲ ಪ್ರತಿಭೆ ಮೂರನೇ ತರಗತಿಯ ಪೃಥು.ಪಿ.ಅದ್ವೈತ್ ೩೦ ನಿಮಿಷಗಳಲ್ಲಿ ಭಗವದ್ಗೀತೆಯ ೧೫೦ ಶ್ಲೋಕಗಳನ್ನು ಅಳುಕಿಲ್ಲದೆ ಧ್ವನಿ ಏರಿಳಿತಗಳ ಮೂಲಕ ನಿರರ್ಗಳವಾಗಿ ಹಾಡಿದ ರೀತಿ ನೆರೆದ ಸಮೂಹವನ್ನು ಮೂಕ ವಿಸ್ಮಿತರನ್ನಾಗಿಸಿತು.

ಸರಸ್ವತಿಯ ಶ್ವೇತವರ್ಣಕಚಿತ ಮಯೂರನ ಗರಿಗಳಲ್ಲಿ ಕಾಣುವ ಪ್ರಕೃತಿಯ ವಿಹಂಗಮ ನೋಟವೆಂಬ ಸಂಗೀತವು ಬ್ರಹ್ಮನ ರಾಣಿಯ ಉರಗಳಲ್ಲಿ ಕುಳಿತು ಸಂಗೀತ ಸುಧೆಯನ್ನರಿಸುವ ವೀಣೆಯು ಸಪ್ತಸಾಗರಗಳಾಚೆ ಕಾಣದ ಕಡಲಿಗೆ ಕರೆದೋಯ್ದು ಸಪ್ತಸ್ವರಗಳ ರಸದೌತಣವನ್ನೇ ಉಣಬಡಿಸುತ್ತಿದ್ದ ಬಾಲ ಕಣ್ಮಣಿ ಮೂರನೇ ತರಗತಿಯ ತೋಷನ್.ಜಿ.ರಾವ್ ೧೪ ಗಂಟೆಗಳ ಕಾಲ!! ಪೂರ್ಣ ಚೇತನ ಪಬ್ಲಿಕ್ ಶಾಲೆಯ “ಉಜ್ಜೈನ್” ಎಂಬ ಕೊಠಡಿಯಲ್ಲಿ. ಕನ್ನಡದ ರತ್ನತ್ರಯರಲ್ಲಿ ಒಬ್ಬನಾದ ಕವಿ ಶ್ರೇಷ್ಠ ‘ರನ್ನ’ ತನ್ನ ಮಧ್ಯ ವಯಸ್ಸಿನಲ್ಲಿ ತಾನು ಕಾವ್ಯ ರಚಿಸಿ ಹೆಮ್ಮೆಯಿಂದ ತನ್ನ ಸಾಧನೆಯನ್ನು ಕುರಿತು” ಸರಸ್ವತಿಯ ಭಂಡಾರವನ್ನೇ ಸೂರೆಗೊಂಡೆ ನಾ” ಎಂದು ಹೇಳಿಕೊಂಡಿದ್ದ ಆ ಮಾತನ್ನು ಸಾವಿರದ ನೂರ ಮೂರು ವರ್ಷಗಳ ನಂತರ ಈ ಮಗು ಸರಸ್ವತಿಯ ವೀಣೆಯ ನಾದಸ್ವರಗಳನ್ನು ತನ್ನ ಎಳೆಯ ಪ್ರಾಯದಲ್ಲಿ ಹಸುಳೆಯ ಅಂಗುಲಿಗಳಲ್ಲಿ ನುಡಿಸುತ್ತಿತ್ತೆಂದರೆ ಸರಸ್ವತಿಯೇ ಧರೆಗಿಳಿದು ಮಗುವಿನ ರೂಪ ತಾಳಿ ತನ್ನ ಕರತಲಾಮಲಕದಿಂದ ವಿಕೃತಿಗೆ ಪ್ರಕೃತಿಯ ರೂಪ ನೀಡುತ್ತಿದ್ದಾಳೆ ಎಂಬಂತೆ ಭಾಸವಾಗುತ್ತಿತ್ತು! ಶಾಲೆಯು ಪ್ರಾರಂಭವಾದ ಸಂವತ್ಸರ ಸನ್ನಿವೇಶದಲ್ಲಿ ಋಷಿ ಗುರುಕುಲದ ತಿಲಕಪ್ರಾಯರು, ವಿದ್ವನ್ಮಣಿಗಳಾದ ರಮೇಶ್ ಗುರೂಜಿಯವರು ಸಿದ್ಧ ಸಮಾಧಿ ಯೋಗ ದೀಕ್ಷೆಯನ್ನು ನಮಗೆ ನೀಡಲು ಆಗಮಿಸಿ, ಶಾಲೆಯ ಒಳಗೆ ಪ್ರವೇಶಿಸಿ ತಮ್ಮ ಪಾದಸ್ಪರ್ಶ ಮಾಡಿದಾಗಲೇ ಭಾವ ಪರವಶರಾಗಿ ಆ… ಎಂಥ! ಅನುಭವ ವಿದ್ಯುತ್ ಸಂಚಾರ ದೇವರ ಅನುಗ್ರಹ ಹಾಗೂ ಮಹಾನ್ ಸತ್ಪುರುಷರು, ಸಾಧು-ಸಂತರು ಸ್ಪರ್ಶಿಸಿದ ಈ ಪವಿತ್ರ ಸ್ಥಳದಲ್ಲಿ ಎಂದು ಈ ಸ್ಥಳ ಮಹಿಮೆಯನ್ನು ಹೇಳಿದ್ದು ನಮ್ಮ ಕರ್ಣಗಳಲ್ಲಿ ಇಂದಿಗೂ ಮಾರ್ದನಿಸುತ್ತಿದೆ. ಆ ಮಗು ನುಡಿಸುತ್ತಿದ್ದ ಸಂಗೀತ.. ನೆಟ್ಟಿಗರನ್ನು ಮಂತ್ರಮುಗ್ಧರನ್ನಾಗಿಸಿ, ಆನಂದ ಭಾಷ್ಪವು ಅನಂತವಾಗಿ ಹೊಳೆಹರಿಸುತ್ತಿತ್ತು… ಇಂತಹ ಬಾಲ ಪ್ರತಿಭೆಗಳಿಗೆ ಕೋಟಿ ನಮನಗಳು.

ದ್ವಾಪರಾಯುಗದಲ್ಲಿ ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ಗೀತೆಯನ್ನು ಬೋಧಿಸಿದ “ಧರ್ಮೋರಕ್ಷತಿ ರಕ್ಷಿತಃ” ಎಂದು ಕಲಿಯುಗದಲ್ಲಿ ಮೂಲ್ಕುಟ್ಲು ಮೋಕ್ಷದ ಅದೇ ಭಗವದ್ಗೀತೆಯನ್ನು ೧೮ ಆಶ್ವಾಸಗಳ ಮೂಲಕ ಸುಧೀರ್ಘ ೧೪ ಗಂಟೆಗಳ ಕಾಲ ಬೋಧಿಸಿ ಕಲಿಯುಗವನ್ನು ದ್ವಾಪರಕ್ಕೆ ಕೊಂಡೊಯ್ದಳು!! ಆಕೆಯು ಗೀತೆಯನ್ನು ಹಾಡಿದ ರೀತಿಯು ಕುವೆಂಪುರವರು “ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಭಾರತ ಕಣ್ಣಲ್ಲಿ ತೆರೆಯುವುದು” ಎಂದು ತಮ್ಮ ಕುಂಚದಲ್ಲಿ ಗೀಚಿದ್ದಂತೆಯೂ ವ್ಯಾಸರು ವಿಘ್ನೇಶನ ಮೂಲಕ ಹಾಡಿಸಿದಂತೆಯೂ ಇತ್ತು! ಕೇಳಿದವರ ಪಾಪಪ್ರಜ್ಞೆಯು ಕಣ್ಮರೆಯಾಗಿ ಜೀವನ ಸಾರ್ಥಕವಾಯಿತು.”ಕರ್ಮಣ್ಯೇವಾಧಿಕಾರಸ್ತೆ ಮಾಫಲೇಶು ಕದಾಚನ” ಎಂಬ ಭಗವಂತನ ಮಾತಿನಂತೆ ಈ ಮಗುವಿಗೆ ಕಲಿಕಾ ಮಾರ್ಗದರ್ಶನ ನೀಡಿದ ಗುರುವೃಂದ, ಪೋಷಕ ವೃಂದ, ಜಂಗಮವೃಂದಕ್ಕೆ ಅನಂತ ಅನಂತ ಪ್ರಣಾಮಗಳು.

ಪ್ರಕೃತಿಯನ್ನು ಪೋಷಿಸಿದರೆ ಅದು ನಮ್ಮನ್ನು ಪೊರೆಯುತ್ತದೆ ಇದರ ಅರಿವಿಲ್ಲದೆ ಇಂದು ಜಾಗತಿಕ ತಾಪಮಾನ, ಅತೀವೃಷ್ಟಿ, ಅನಾವೃಷ್ಟಿ, ಭೂಕಂಪ, ಜಾಗೃತಿ ಜ್ವಾಲಾಮುಖಿಗಳು ಹೀಗೆ ಹತ್ತು ಹಲವು ಸಮಸ್ಯೆಗಳು ಕಣ್ಣಾರೆ ಕಾಣುತ್ತಿದ್ದರೂ ಪ್ರಕೃತಿಯ ಮುನಿಸಿಗೆ ನಾವು ಸ್ಪಂದಿಸುತ್ತಿಲ್ಲ. ಭಾರತದ ಘನವೆತ್ತ, ಸರ್ವಶ್ರೇಷ್ಠ ಪ್ರಧಾನಿ ಮೋದೀಜಿ ಅವರ ಸ್ವಚ್ಛ ಭಾರತ ಅಭಿಯಾನದ ಕನಸನ್ನು ನನಸಾಗಿಸಲೆಂದೇ ನಮ್ಮ ಶಾಲೆಯ ಮಕ್ಕಳ ದಂಡು ಮೈಸೂರು ನಗರದ ಹೃದಯ ಭಾಗಗಳಿಗೆ ತೆರಳಿ, ಪ್ಲಾಸ್ಟಿಕ್ ಸಂಗ್ರಹಿಸಿ ತಂದು ನಿಗಧಿತ ೧೨೦ ನಿಮಿಷಗಳ ಸಮಯದಲ್ಲಿ ಸಾವಿರಕ್ಕಿಂತ ಹೆಚ್ಚು ಬಾಟಲಿಗಳಿಗೆ ತುಂಬಿ ಎಕೋ ಬ್ರಿಕ್ಸ್ ಗಳನ್ನು ತಯಾರಿಸಿ ಜಾಗತಿಕ ಮಟ್ಟದಲ್ಲಿ ಸವಾಲಾಗಿದ್ದ ಪ್ಲಾಸ್ಟಿಕ್ ಗಳ ವಿಲೇವಾರಿಗೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲು ಮಾಡಿದ ಕಸರತ್ತಿಗೆ ವಿಶ್ವವೇ ಪ್ರಶಂಸಿಸುವಂತಾಗಿದೆ.

ನಮ್ಮ ಪೂರ್ಣಚೇತನ ಪಬ್ಲಿಕ್ ಶಾಲೆಯ ಮಕ್ಕಳ ಸಾಧನೆಯ ಪಥ ಮುಂದುವರಿಯುತ್ತಾ ವಾತಾವರಣವನ್ನು ತಂಪಾಗಿಸುವ ಮೂಲಕ ಜಾಗತಿಕ ತಾಪಮಾನವನ್ನು ಶಮನಗೊಳಿಸಲು ಮುಂದಡಿಯಿಟ್ಟು ೧೨೦ ನಿಮಿಷಗಳ ಸೂಚಿತ ಸಮಯದಲ್ಲಿ ಮುಂಚಿತವಾಗಿ ಹದಗೊಳಿಸಿಕೊಂಡಿದ್ದ ಮಣ್ಣು, ಗೊಬ್ಬರಗಳ ಸಮ್ಮಿಶ್ರಣವನ್ನು ಒಂದು ಕಿಲೋಗ್ರಾಂ ಬ್ಯಾಗಿಗೆ ಮುಕ್ಕಾಲಷ್ಟು ತುಂಬಿ ಮುಂಚೆಯೇ ಸಂಸ್ಕರಿಸಿ ನೆನೆಸಿಟ್ಟು ಮೊಳಕೆ ಬರಲು ಅನುವು ಮಾಡಿಕೊಂಡಿದ್ದ ಬೀಜಗಳನ್ನು ಹಾಕುತ್ತಾ ಸಾಸಿರಗಟ್ಟಲೆ ಗ್ರೋ ಬ್ಯಾಗ್ ಗಳನ್ನು ತಯಾರಿಸಿದ ನಮ್ಮ ಬಾಲ ಪ್ರತಿಭೆಗಳ ಸೃಜನಾತ್ಮಕ, ಶ್ರಮಯುಕ್ತ ಕಲಾ ಚಟುವಟಿಕೆಗಳಿಗೆ ಸಾಟಿಯೇ ಇಲ್ಲ. ಅಳಿವಿನಂಚಿನಲ್ಲಿರುವ ಹಾಗೂ ಗಾಳಿಯನ್ನು ಶುದ್ಧೀಕರಿಸುವ, ವಾತಾವರಣವನ್ನು ತಂಪಾಗಿಸುವ, ಜೀವರಾಶಿಗಳಿಗೆ ಆಶ್ರಯ ನೀಡುವ ಹೊಂಗೆ, ಆಲ, ಅರಳಿ, ಬಸರಿ, ಮತ್ತಿ, ಕಾಡುಮತ್ತಿ, ತೇಗು ಶ್ರೀಗಂಧ, ಹೊನ್ನೆ, ಪನ್ನೇರಳೆ, ಕಾಡು ಬಾದಾಮಿ, ಬಸವನಪಾದ ಹೀಗೆ ಸುಮಾರು ೨೦ಕ್ಕೂ ಹೆಚ್ಚು ವಿಧದ ತಳಿಯ ಬೀಜಗಳನ್ನು ನೀಡಿ ನಮ್ಮ ಮಕ್ಕಳಿಂದ ಶ್ರಮದಾನವನ್ನು ಮಾಡಿಸಲು ಸಹಕರಿಸಿದ ಮೈಸೂರು-ಚಾಮರಾಜನಗರ ವಲಯ ಅರಣ್ಯ ಅಧಿಕಾರಿಗಳು ಹಾಗೂ ಹವ್ಯಾಸಿ ಬೀಜ ಸಂಗ್ರಹಗಾರರಿಗೆ ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸುತ್ತೇವೆ. ಅಸಂಖ್ಯ ಸಸ್ಯ ಸಂರಕ್ಷಿತ ಚೀಲ (Grow Bags) ಗಳನ್ನು ಹಾಗೂ ಗೊಬ್ಬರ ಮಿಶ್ರಿತ ಮಣ್ಣನ್ನು ನೀಡಿ ಸಹಾಯ ಹಸ್ತ ನೀಡಿದ ಸಚ್ಚಿದಾನಂದ ಆಶ್ರಮದ ಪೂಜ್ಯರು ಹಾಗೂ ಒಡನಾಡಿಗಳಿಗೆ ಭಕ್ತಿ ಪೂರ್ವಕ ಪ್ರಾಣಾಮಗಳನ್ನು ಸಲ್ಲಿಸುತ್ತೇವೆ.
ಭಾರತ ಹಳ್ಳಿಗಳ ನಾಡು. ವಿಭಿನ್ನ ಸಂಸ್ಕೃತಿಯ ತವರೂರು. ಹಬ್ಬ, ಹರಿದಿನ, ಹುಣ್ಣಿಮೆಗಳಲ್ಲಿ ತಮ್ಮದೇ ರೀತಿಯ ಶೈಲಿಯಲ್ಲಿ ನೃತ್ಯವನ್ನು ಮಾಡಿ ಸಂಭ್ರಮಿಸುವ ಪರಿಯನ್ನು, ಬಣ್ಣಬಣ್ಣದ ರಂಗಿನ ಚಿತ್ತಾರ ಮೂಡಿಸುವ ಬಟ್ಟೆಗಳನ್ನು ತೊಟ್ಟು ನಮ್ಮ ಪೂರ್ಣ ಚೇತನ ಪಬ್ಲಿಕ್ ಶಾಲೆಯ ಮಕ್ಕಳು ನರ್ತಿಸಿದ ರೀತಿಯು ನೆರೆದ ಜನಸಾಗರವನ್ನು ಮಂತ್ರಮುಗ್ಧರನ್ನಾಗಿಸಿತು. ಕಲೆ, ಸಾಹಿತ್ಯ, ನೃತ್ಯದ ನವರಸದ ಭಾವಗಳನ್ನು ಒಳಗೊಂಡ ವೈಯಾರವು ಲೋಯರ್ ಕಿಂಡರ್ ಗಾರ್ಟನ್ ನಿಂದ ಹಿಡಿದು ಹತ್ತನೇ ತರಗತಿಯಲ್ಲಿ ಓದುತ್ತಿರುವ ೫೨೫ ಮಕ್ಕಳು ತಾವು ತೋರಿದ ಕಲಾ ಪ್ರತಿಭಾ ಸಾಮರ್ಥ್ಯವು ಹೇಗಿತ್ತೆಂದರೆ ಆದಿಕವಿ ಪಂಪ ವಿರಚಿತ ಆದಿಪುರಾಣದಲ್ಲಿರುವ ನೀಲಾಂಜನೆಯ ನೃತ್ಯ ಪ್ರದರ್ಶನವನ್ನು ಸಾಕ್ಷೀಕರಿಸಲು ದೇವೇಂದ್ರನು ಸೃಷ್ಟಿಸಿದ ರತ್ನಖಚಿತ ಮಂಟಪದಲ್ಲಿ ಆದಿನಾಥನನ್ನು ಮುಖ್ಯವಾಗಿರಿಸಿ, ದೇವಲೋಕದ ಅಪ್ಸರೆಯರು, ದೇವತೆಗಳು, ಅಶ್ವಿನಿ ದೇವತೆಗಳು, ಕಿಂಪುರುಷರ ಸಮೂಹವೇ ಧರೆಗಿಳಿದು ಆಕೆಯ ನೃತ್ಯದ ರಸದೂಟವನ್ನು ಕಣ್ತುಂಬಿ ಕೊಂಡಂತೆ! ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಆಡಿಟೋರಿಯಂನಲ್ಲಿ ನೆರೆದ ಕಲಾರಸಿಕರ ಮನಸೂರೆಗೊಂಡ ನಮ್ಮ ಪೂರ್ಣ ಚೇತನ ಶಾಲೆಯ ಮಕ್ಕಳ ನೃತ್ಯದ ವಿರಾಟ್ ಸ್ವರೂಪಕ್ಕೆ ಕಾರಣಕರ್ತರಾದ ಸಕಲ ಸನ್ಮಂಗಳ ಶಾಲಾ ಸಂಸ್ಥಾಪಕರು, ಸಪರಿವಾರ, ಮುಖ್ಯಕಾರ್ಯನಿರ್ವಾಹಕರು, ಆಡಳಿತ ಮಂಡಳಿಯ ಪದಾಧಿಕಾರಿಗಳು, ಶಾಲೆಯ ಶಿಕ್ಷಕ ಹಾಗೂ ಶಿಕ್ಷಕೇತರ ಬಳಗ, ಶಾಲಾ ಶುಚಿತ್ವವನ್ನು ಕಾಪಾಡಿಕೊಂಡು ಬರುತ್ತಿರುವ ಮಾತೆಯರು, ಮಕ್ಕಳಿಗೆ ನೃತ್ಯವನ್ನು ಕಲಿಸಲು ಶ್ರಮಿಸಿದ ಕಲಾ ಪ್ರತಿಭೆಗಳು, ನಮ್ಮ ಮಕ್ಕಳ ಪೋಷಕರ ಪ್ರೋತ್ಸಾಹಯುತ ಹಾರೈಕೆ, ಆಶೀರ್ವಾದಗಳು, ವಾಹನ ಚಾಲಕರು, ಪರಿವೀಕ್ಷಕರ ತಾಳ್ಮೆಯುತ ಪರಿಶ್ರಮ, ಮಳೆಗಾಲದ ಈ ಋತುಮಾನದಲ್ಲಿ ನಮ್ಮ ಮಕ್ಕಳು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಲು ಪ್ರಯತ್ನಿಸಿದ ರೀತಿ ಹರಸಾಹಸವೇ!
ಈ ಮೇಲ್ಕಾಣಿಸಿದ ಎಲ್ಲಾ ನಮ್ಮ ಮಕ್ಕಳ ಸಾಧನೆಯನ್ನು ಮೌಲ್ಯಮಾಪನ ಮಾಡಿದ ಎಲೈಟ್ ವರ್ಲ್ಡ್ ರೆಕಾರ್ಡ್ ಅಕಾಡೆಮಿ, ಇಂಡಿಯನ್ ರೆಕಾರ್ಡ್ ಅಕಾಡೆಮಿ, ಏಷಿಯನ್ ರೆಕಾರ್ಡ್ ಅಕಾಡೆಮಿಯ ಮುಖ್ಯಸ್ಥರು, ಕಾರ್ಯನಿರ್ವಾಹಕ ಅಧಿಕಾರಿಗಳು, ಪದಾಧಿಕಾರಿಗಳು, ಸಮಯ ಪರಿವೀಕ್ಷಕರು, ಸಾಕ್ಷಿಗಳು ಹೀಗೆ ನಮ್ಮ ಪೂರ್ಣ ಚೇತನ ಪಬ್ಲಿಕ್ ಶಾಲೆಯು ಜಾಗತಿಕ ಮಟ್ಟದಲ್ಲಿ ಪರಿಸರ ಸ್ನೇಹಿ, ಸಾಮಾಜಿಕ ಜಾಗೃತಿಯ ಅರಿವನ್ನು ಮೂಡಿಸಿದ ಕಾರ್ಯಕ್ರಮಗಳಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿ ಸಹಕರಿಸಿದ ಸರ್ವರಿಗೂ ಕರಗಳನ್ನು ಜೋಡಿಸಿ, ನಮನಗಳನ್ನು ಸಲ್ಲಿಸುತ್ತಾ ಎಷ್ಟು ವರ್ಣಿಸಲಿ ನಾ ಪೂರ್ಣ ಚೇತನ ಪಬ್ಲಿಕ್ ಶಾಲೆಯ ಮಕ್ಕಳ ಸಾಧನೆಯ ತಾವರಕಟ್ಟೆ ಮಹದೇಶ್ವರನ ಕೃಪೆಯಿಂದ ಹೇಳಿದೆ ಕಂಡಷ್ಟು. 🙏🏻