ಮರಳಿ ಬ೦ದ ಜೀವ
ಮೈಸೂರಿನಲ್ಲಿ ಲಿಂಗಯ್ಯ ಮತ್ತು ಲಕ್ಕಮ್ಮ ಎಂಬ ದಂಪತಿಗಳು ವಾಸಿಸುತ್ತಿದ್ದರು. ಈ ದಂಪತಿಗಳಿಗೆ ೭ ಜನ ಮಕ್ಕಳು ಇದ್ದರು. ಬಂದದ್ದು ಬರಲಿ ಭಗವಂತನ ದಯೆ ಇರಲಿ ಎಂಬಂತೆ ಇವರ ಸಂಸಾರ ನಿರ್ವಹಣೆಗಾಗಿ ಒಂದು ಚಿಕ್ಕ ಎಳನೀರು ಅಂಗಡಿ ಇಟ್ಟುಕೊಂಡಿದ್ದರು. ಇವರ ಏಳು ಮಕ್ಕಳಲ್ಲಿ ಶಾಂತಕುಮಾರಿ ನಾಲ್ಕನೆಯವರು.
ಇವರು ದಿನಾಂಕ ೧೭-೭-೧೯೫೯ರಲ್ಲಿ ಜನಿಸಿದರು.ಇವರು ಕೇವಲ ೧೦ನೇ ತರಗತಿವರಗೆ ಮಾತ್ರ ಓದಿದರು, ಮುಂದೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲಾಗಲಿಲ್ಲ ಕಾರಣ ಅವರಿಗಿದ್ದ ಅತಿಯಾದ ಬಡತನ. ಇದಾದ ಕೆಲವು ವರ್ಷಗಳ ನಂತರ ಇವರಿಗೆ ೩೦-೬-೧೯೮೪ ರಂದು ಬಾಲಕೃಷ್ಣನ್ ಎಂಬುವವರ ಜೊತೆ ವಿವಾಹವಾಗುತ್ತದೆ. ಬಾಲಕೃಷ್ಣನ್ ಅವರು ಕೆ.ಎಸ್.ಆರ್.ಟಿ.ಸಿ ಯಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿರುತ್ತಾರೆ. ಅವರ ಆಸೆಯಂತೆ ಸ್ವಂತ ಮನೆಯನ್ನೂ ಸಹ ನಿರ್ಮಿಸುತ್ತಾರೆ. ಕೆಲವು ವರ್ಷಗಳ ನಂತರ ಅವರು ಮುದ್ದಾದ ಒಂದು ಗಂಡು ಮಗುವಿಗೆ ಜನ್ಮನೀಡುತ್ತಾರೆ. ಹೆಸರು ಅವಿನಾಶ ಎಂದು ಇವನು ಹುಟ್ಟಿದ ೫ ವರ್ಷಗಳ ನಂತರ ಇನ್ನೊಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮನೀಡುತ್ತಾರೆ. ಅವಳ ಹೆಸರು ಆಶಾ ಎಂದು. ಇವರು ಸುಖ-ಸಂತೋಷದಿಂದ ಜೀವನ ಸಾಗಿಸುತ್ತಿರುತ್ತಾರೆ.
ವಿಧಿಯ ಆಟವನ್ನು ಬಲ್ಲವರಾರು? ಬಾಲಕೃಷ್ಣನ್ ಅವರು ೨೫-೦೧-೧೯೯೩ರಂದು ರಸ್ತೆ ಅಪಘಾತವೊಂದರಲ್ಲಿ ಮರಣ ಹೊಂದುತ್ತಾರೆ. ಆ ಸಮಯದಲ್ಲಿ ಶಾಂತಕುಮಾರಿಯವರು ಮಾನಸಿಕವಾಗಿ ಕುಗ್ಗದೆ, ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಿಸಬೇಕೆ೦ದು ನಿರ್ಧರಿಸುತ್ತಾರೆ. ದೇವರ ಅನುಗ್ರಹದಂತೆ ಅವರ ಕುಟುಂಬಕ್ಕೆ ಆಸರೆಯಾಗಲು ಇವರಿಗೆ ತಮ್ಮ ಗಂಡನ ಕೆಲಸಕ್ಕೆ ಪರ್ಯಾಯವಾಗಿ ಕೆ.ಎಸ್.ಆರ್.ಟಿ.ಸಿ ಯಲ್ಲಿ ಅಟೆಂಡರ್ ಕೆಲಸ ಸಿಗುತ್ತದೆ. ತುಮಕೂರಿನಿಂದ ಕುಣಿಗಲ್ ತನಕ ಬಂದು ಕೆಲಸ ಮಾಡಿ ಮತ್ತೆ ತುಮಕೂರಿಗೆ ತೆರಳುತ್ತಿರುತ್ತಾರೆ.. ಹೀಗೆ ಅವರು ಆರು ತಿಂಗಳುಗಳ ಕಾಲ ಅಲ್ಲಿ ಕೆಲಸ ಮಾಡುತ್ತಾರೆ. ಅದಾದ ನಂತರ ಕುಣಿಗಲ್ನಿಂದ ತುಮಕೂರಿಗೆ ವರ್ಗಾವಣೆ ಮಾಡಿಸಿಕೊಂಡರು. ಹಾಗೆಯೇ ಇವರು ದೈವ ಭಕ್ತಿಯನ್ನು ಸಹ ಹೊಂದಿದ್ದು ಹದಿನಾರು ಸೋಮವಾರಗಳು ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ. ಹೀಗೆ ಒಂದು ದಿನ ಶಾಂತರವರು ದೇವರ ಪ್ರಾರ್ಥನೆ ಮಾಡುತ್ತಿರುವಾಗ ತೀವ್ರ ಹೊಟ್ಟೆನೋವು ಕಾಣಿಸಿಕೊ೦ಡಿತು, ಆ ಅಸಾಧ್ಯ ನೋವನ್ನು ತಡೆಯಲಾರದೆ ತಕ್ಷಣ ಅವರು ಆಸ್ಪತ್ರೆಗೆ ತೆರಳಿದರು. ಅಲ್ಲಿ ಡಾಕ್ಟರ್ ಗುರುಕಿರಣ್ ಎಂಬುವವರು ಶಾಂತಕುಮಾರಿಯವರಿಗೆ ಚಿಕಿತ್ಸೆಯನ್ನು ನೀಡುತ್ತಾರೆ. . ಆದರೂ ಅವರಿಗೆ ಹೊಟ್ಟೆನೋವು ಮಾತ್ರ ಕಡಿಮೆಯಾಗಲಿಲ್ಲ. ವೈದ್ಯರು ಸ್ಕ್ಯಾನಿಂಗ್ ಮಾಡಿಸೋಕೆ ಹೇಳುತ್ತಾರೆ. ಸ್ಕ್ಯಾನಿಂಗ್ ಮಾಡಿಸಿದ ಬಳಿಕ ವ್ಯೆದ್ಯರ ಬಳಿ ಹೋದಾಗ ಅವರು ಸ್ಕ್ಯಾನಿಂಗ್ ರಿಪೋರ್ಟ್ಅನ್ನು ನೋಡಿ ನಿಮಗೆ ಲಿವರ್ ಕ್ಯಾನ್ಸರ್ ಇದೆ ಎಂದು ಹೇಳುತ್ತಾರೆ. ನಂತರ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗುತ್ತದೆ. ಆಗ ಅವರ ಮಗಳು ದ್ವಿತೀಯ ಪಿ.ಯು.ಸಿ ಯಲ್ಲಿ ಓದುತ್ತಿದ್ದು, ಮಗ ದ್ವಿತೀಯ ವರ್ಷದ ಇಂಜಿನಿಯರಿಂಗ್ನಲ್ಲಿ ಓದುತ್ತಿದ್ದನು. ಆ ಸಮಯದಲ್ಲಿ ಮಕ್ಕಳು ತಮ್ಮ ವಿದ್ಯಾಭ್ಯಾಸದ ಜೊತೆಜೊತೆಯಲ್ಲೇ ತಾಯಿಯನ್ನು ನೋಡಿಕೊಳ್ಳುತ್ತಿದ್ದರು.
ಅವರಿಗೆ ಒಟ್ಟು ಮೂರು ಆಪರೇಷನ್ ಗಳನ್ನು ಮಾಡಲಾಯಿತು. ದೇವರ ಅನುಗ್ರಹದಿಂದ ಈ ಆಪರೇಷನ್ಗಳು ಯಶಸ್ವಿಯಾದವು. ವೈದ್ಯರು ಅವರಿಗೆ ಆಪರೇಷನ್ ಯಶಸ್ವಿಯಾಗಿದೆ ಇನ್ನು ಮುಂದೆ ಏನೂ ಅಪಾಯವಿಲ್ಲ ನೀವೆಲ್ಲರೂ ನೆಮ್ಮದಿಯಿಂದ ಇರಬಹುದು ಎಂದು ಭರವಸೆಯನ್ನು ನೀಡಿದರು. ಆಗ ಎಲ್ಲರೂ “ಕ್ಯಾನ್ಸರ್ ಗೆದ್ದು ಬಂದ ಶಾಂತಕುಮಾರಿ” ಎಂದು ಹೇಳತೊಡಗಿದರು. ಅನಾರೋಗ್ಯದಿಂದ ಚೇತರಿಸಿಕೊಂಡ ಮೂರು ತಿಂಗಳ ನಂತರ ಮತ್ತೆ ಕೆ.ಎಸ್.ಆರ್.ಟಿ.ಸಿ ಯಲ್ಲಿ ತಮ್ಮ ವೃತ್ತಿಯನ್ನು ಮುಂದುವರಿಸಿದರು. ಕೆಲವು ವರ್ಷಗಳ ನಂತರ ಅವರ ಮಗಳಿಗೆ ಒಂದು ಕಂಪನಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿ ಕೆಲಸ ಸಿಕ್ಕಿತು. ಅವರ ಮಗನಿಗೂ ಫಿಲ್ಮ್ ಇಂಡಸ್ಟ್ರಿಯಲ್ಲಿ ಕೊರಿಯೋಗ್ರಾಫರ್ ಆಗಿ ಕೆಲಸ ಸಿಕ್ಕಿತು. ಈಗ ಇಬ್ಬರು ಮಕ್ಕಳು ತಮ್ಮ ತಾಯಿಯನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಶಾಂತಕುಮಾರಿಯವರು ತಮ್ಮ ಮಗಳು ಮತ್ತು ಮಗನಿಗೆ ಮದುವೆಯನ್ನು ಸಹ ಮಾಡುತ್ತಾರೆ.. ಈಗ ಆಕೆಗೆ ಯಾವುದೇ ಅನಾರೋಗ್ಯದ ಚಿಂತೆ ಇಲ್ಲದೇ ಸುಖ-ಶಾಂತಿ, ನೆಮ್ಮದಿಯಿ೦ದ ಜೀವನ ಸಾಗಿಸುತ್ತಿದ್ದಾರೆ. ತಮ್ಮ ಪುನರ್ಜನ್ಮಕ್ಕೆ ಕಾರಣರಾದ ಡಾಕ್ಟರ್ ಗುರುಕಿರಣ್ ಸರ್ ಅವರಿಗೆ ಕೋಟಿ ಕೋಟಿ ನಮನವನ್ನು ಸಲ್ಲಿಸುತ್ತಾ, ಅನ್ನವನ್ನು ಕೈಯಿಂದ ಎತ್ತಿ ಬಾಯಿಗೆ ಹಾಕುವ ಮುನ್ನ ಅವರನ್ನು ನೆನೆಯುತ್ತಿದ್ದಾರೆ.
ಇದು ನನ್ನ (ಲಿಖಿತಶ್ರೀ) ಅಜ್ಜಿಯ ಜೀವನದ ನೈಜ ಕಥೆಯಾಗಿದೆ. ಈ ಕಥೆಯು ಜೀವನದಲ್ಲಿ ಧೈರ್ಯ, ಸಹನೆ ಮತ್ತು ನಂಬಿಕೆಯ ಮಹತ್ವವನ್ನು ಬಿಂಬಿಸುತ್ತದೆ. ಜೀವನದಲ್ಲಿ ಯಾವುದೇ ಸಂಕಷ್ಟ ಬಂದರೂ ಹೋರಾಟವನ್ನು ನಿಲ್ಲಿಸದೆ, ದೃಢ ಚಿತ್ತದಿಂದ ಮುನ್ನಡೆದರೆ ಯಶಸ್ಸು ಖಂಡಿತ ಸಿಗುತ್ತದೆ ಎಂಬುದಕ್ಕೆ ಈ ಕಥೆಯು ಜೀವಂತ ಉದಾಹರಣೆಯಾಗಿದೆ. ಶಾಂತಕುಮಾರಿಯವರು ಎಲ್ಲ ದುಗುಡಗಳ ನಡುವೆಯೂ ಆತ್ಮವಿಶ್ವಾಸದಿಂದ ಹೋರಾಡಿ, ಮಕ್ಕಳ ಭವಿಷ್ಯ ಕಟ್ಟಿದ ಅಪ್ರತಿಮ ಮಹಿಳೆಯರ ಸಾಲಿನಲ್ಲಿ ನಿಲ್ಲುತ್ತಾರೆ. ಇಂತಹ ನನ್ನ ಅಜ್ಜಿಯ ಬದುಕು ಎಲ್ಲರಿಗೂ ಪ್ರೇರಣೆಯಾಗಲಿ ಎಂಬುದು ನನ್ನ ಆಶಯ!