🌙 ಶುಭರಾತ್ರಿ ಕಥೆಗಳು – ನಿದ್ರೆಯೊಳಗಿನ ಮೌಲ್ಯಗಳ ಸಾರ.
ಶುಭರಾತ್ರಿ ಕಥೆಗಳ ಶತಕ ಸಂಭ್ರಮ

ರಾತ್ರಿ ನಿಶ್ಶಬ್ದವಾಗುತ್ತದೆ… ಮೊಬೈಲ್ ಪರದೆಗಳು ಹೊಳೆಯುತ್ತವೆ…
ಆದರೆ ಪೂರ್ಣ ಚೇತನ ಶಾಲೆಯ “ ಶುಭರಾತ್ರಿ ಕಥೆಗಳು ” ಆ ಕತ್ತಲೆಯ ನಡುವೆ ಮೌಲ್ಯಗಳ ಬೆಳಕನ್ನು ಹಚ್ಚುತ್ತಿವೆ. ಮಕ್ಕಳಿಗೆ ನಿದ್ರೆಗೆ ಹೋಗುವ ಮುನ್ನ ಮಧುರವಾದ ಕಥೆ ಕೇಳಿಸುವ ಪರಂಪರೆ ನಮ್ಮ ಭಾರತೀಯ ಸಂಸ್ಕೃತಿಯ ಅಮೂಲ್ಯವಾದ ಒಂದು ಭಾಗ ಎಂದರೆ ತಪ್ಪಾಗಲಾರದು. ಅಜ್ಜಿ–ತಾತಂದಿರ ಕಾಲದಲ್ಲಿ ಈ ಕಥೆಗಳು ಕೇವಲ ಮನರಂಜನೆಯಲ್ಲ — ಅವು ಜೀವನದ ಪಾಠ, ಧರ್ಮಬೋಧನೆ ಮತ್ತು ಮನುಷ್ಯತ್ವದ ಬೀಜಗಳನ್ನು ಬಿತ್ತುತ್ತಿದ್ದವು.
ಇಂದಿನ ಡಿಜಿಟಲ್ ಯುಗದಲ್ಲಿ ಆ ಮಧುರ ಕ್ಷಣಗಳು ಮಾಯವಾಗುತ್ತಿರುವ ಸಂದರ್ಭದಲ್ಲೇ, ನಮ್ಮ ಶಾಲೆಯು ಹೊಸ ಬೆಳಕಿನ ದಾರಿ ತೆರೆಯಿತು ಶುಭರಾತ್ರಿ ಕಥೆಗಳು ಎಂಬ ಹೃದಯಸ್ಪರ್ಶಿ ಶೀರ್ಷಿಕೆಯ ಮೂಲಕ. ಪ್ರತಿದಿನ ರಾತ್ರಿ ಒಂದೊಂದು ಕಥೆಯಂತೆ ಪಂಚತಂತ್ರ, ರಾಮಾಯಣ, ಮಹಾಭಾರತ ಮತ್ತು ಮೌಲ್ಯಾಧಾರಿತ ಕಥೆಗಳನ್ನುಮಕ್ಕಳು ಕೇವಲ ಮೂರು ಅಥವಾ ನಾಲ್ಕು ನಿಮಿಷಗಳಲ್ಲಿ ಕೇಳಬಹುದು.
ಕಥೆಯ ಅಂತ್ಯದಲ್ಲಿ “ ರಾಮಂ ಸ್ಕಂದಂ ಹನುಮಂತಂ …” ಎಂಬ ಪವಿತ್ರ ಶ್ಲೋಕದ ಧ್ವನಿ ಹರಿಯುತ್ತದೆ.
ಆ ಶಾಂತ ನಾದದ ನಡುವೆ ಮಕ್ಕಳು ನಿಧಾನವಾಗಿ ನಿದ್ರೆಗೆ ಜಾರುತ್ತಾರೆ —ಮನಸ್ಸು ಮೃದುವಾಗಿ ಮೌನದ ಅಲೆಗಳಲ್ಲಿ ತೇಲುತ್ತದೆ.
ಕಥೆ ಕೇವಲ ಕಿವಿಗಳಿಗಲ್ಲ, ಹೃದಯಕ್ಕೂ ತಲುಪುತ್ತದೆ. ಅಲ್ಲಿ ಧೈರ್ಯ, ಸತ್ಯ, ಪ್ರೀತಿ, ಧರ್ಮ ಮತ್ತು ಕರುಣೆಯ ಬೀಜಗಳು ಮೊಳೆಯುತ್ತವೆ.

ಎಲ್ಲರಿಗೂ ಮುಕ್ತವಾದ ಅವಕಾಶ :
ಈ ಕಥೆ ಕೇವಲ ಪೂರ್ಣ ಚೇತನ ಶಾಲೆಯ ಮಕ್ಕಳಿಗಷ್ಟೇ ಅಲ್ಲ. ಶಾಲೆಯು ನೀಡಿದ ವಾಟ್ಸಾಪ್ ಲಿಂಕ್ಗಳ ಮೂಲಕ ದೇಶದ ವಿವಿಧ ಭಾಗಗಳಿಂದ ಸಾವಿರಾರು ಕುಟುಂಬಗಳು ಈ ಶುಭರಾತ್ರಿ ಕಥೆಗಳ ಜೊತೆ ಕನೆಕ್ಟ್ ಆಗಿವೆ.
ಶುಭರಾತ್ರಿ ಕಥೆಗಳ ಬಗ್ಗೆ ಪೋಷಕರ ಮನದಾಳದ ಮಾತುಗಳು
- ಈ ಕತೆಯನ್ನು ಕೇಳಿದ ಮೇಲೆ ನನ್ನ ಮಗು ಶಾಂತವಾಗಿ ನಿದ್ರಿಸುತ್ತದೆ.
- “ಫೋನ್ ಬದಿಗಿಟ್ಟು ಕಥೆ ಕೇಳುವುದು ನಮ್ಮ ಮನೆಗೆ ಹಬ್ಬದ ಕ್ಷಣವಾಗಿದೆ.”
- “ಮಕ್ಕಳು ಹಾಸಿಗೆಯತ್ತ ಹೋಗುವುದೇ ಸಂತೋಷದ ಅಭ್ಯಾಸವಾಗಿದೆ.”
ಈ ಕಥೆಗಳ ಮೂಲಕ ಪೂರ್ಣ ಚೇತನ ಕುಟುಂಬ ಅನೇಕ ಮನೆಗಳಲ್ಲಿ ನೆಮ್ಮದಿ, ಶಾಂತಿ ಮತ್ತು ಮೌಲ್ಯಗಳ ಬೀಜವನ್ನು ಬಿತ್ತಿದೆ.
ಮೌಲ್ಯಗಳ ಹೊಸ ಪಾಠ
ಈ ಪ್ರಯತ್ನದಿಂದ ಮಕ್ಕಳು ಕೇವಲ ಕಥೆಗಳನ್ನು ಕೇಳುವುದಲ್ಲ ಭಾವನೆಗಳ ಹೂರಣದೊಂದಿಗೆ, ಸಂಸ್ಕೃತಿಯ ಸ್ಪರ್ಶಪಡೆದು, ಆತ್ಮಶಾಂತಿಯ ನಿದ್ರೆಗೆ ಜಾರುತ್ತಾರೆ. ಇದು ಒಂದು ಸಣ್ಣ ಕಥೆ — ಆದರೆ ಅದರೊಳಗೆ ಜ್ಞಾನ, ಧರ್ಮ, ಮಮತೆ ಮತ್ತು ಕೃತಜ್ಞತೆಯ ಬೆಳಕು ಪುಟಿದೇಳುತ್ತದೆ .ಪ್ರತಿ ಕಥೆಯೂ ಅವರ ಕನಸಿನಲ್ಲಿ ಮೌಲ್ಯಗಳ ಹೂವಾಗಿ ಅರಳುತ್ತದೆ..

ಶತಕದ ಸಂಭ್ರಮ
* ಇಂದು, ಅಂದರೆ ಅಕ್ಟೋಬರ್ 24, 2025 ಪೂರ್ಣ ಚೇತನ ಪಬ್ಲಿಕ್ ಶಾಲೆಯ “ಶುಭರಾತ್ರಿ ಕಥೆಗಳು” ತನ್ನ ನೂರನೇ ಕಥೆಯ ಮೈಲುಗಲ್ಲು ಮುಟ್ಟುತ್ತಿದೆ!
ನೂರು ರಾತ್ರಿ — ನೂರು ಕಥೆಗಳು — ನೂರು ಮೌಲ್ಯಗಳ ಸಾರ.
ಈ ಶತಕದ ಹಿಂದೆ ಕೇವಲ ಶ್ರಮವಲ್ಲ, ಒಂದು ದೃಷ್ಟಿಯಿದೆ — ಅದುವೇ ಮಕ್ಕಳ ನಿದ್ರೆಯೊಳಗೆ ಶಾಂತಿಯನ್ನು ತುಂಬುವ ದೃಷ್ಟಿ. ಈ ನೂರು ದಿನಗಳ ಪ್ರಯಾಣವು ಸಾವಿರಾರು ಕಿವಿಗಳಲ್ಲಿ ಶಾಂತಿಯ ಬೀಜ ಬಿತ್ತಿದೆ, ಮಕ್ಕಳ ಕನಸಿನಲ್ಲಿ ಸಂಸ್ಕೃತಿಯ ಬೆಳಕು ಹರಿಸಿದೆ.
ಪೂರ್ಣ ಚೇತನವು ಸದಾ ನಂಬಿರುವುದು —ಶಿಕ್ಷಣವೆಂದರೆ ಕೇವಲ ಪಾಠ ಪುಸ್ತಕದಲ್ಲಿ ಮಾತ್ರವಲ್ಲಅದು ಹೃದಯದಲ್ಲಿ, ಭಕ್ತಿಯಲ್ಲಿ, ಸಂಸ್ಕೃತಿಯಲ್ಲಿ ಮತ್ತು ಮೌನದ ನಾದದಲ್ಲಿ ಅರಳಬೇಕು.“ಶುಭರಾತ್ರಿ ಕಥೆಗಳು” ಎಂಬ ಯೋಜನೆ ಅದೇ ದೃಷ್ಟಿಯ ಜೀವಂತ ಉದಾಹರಣೆ.

ಇಂದು ಮಕ್ಕಳ ಮಲಗುವ ಸಮಯವು ಪರದೆಯ ಬೆಳಕಲ್ಲ, ಮೌಲ್ಯಗಳ ಬೆಳಕಿನಿಂದ ಹೊಳೆಯುತ್ತಿದೆ.
ಅಂತಿಮವಾಗಿ ಒಂದು ಕಥೆ, ಒಂದು ಶ್ಲೋಕ, ಒಂದು ನಿಶ್ಶಬ್ದ ಕ್ಷಣ —ಅಷ್ಟೇ ಸಾಕು, ಒಂದು ದಿನವನ್ನು ಶಾಂತಿಯಿಂದ ಮುಗಿಸಲು. ಇಂದು ಮಕ್ಕಳ ಮಲಗುವ ಸಮಯವು ಪರದೆಯ ಬೆಳಕಲ್ಲ,
ಮೌಲ್ಯಗಳ ಬೆಳಕು.

100ರ ಶುಭರಾತ್ರಿಯ ಕಥೆಯೊಂದಿಗೆ ಎಲ್ಲರಿಗೂ ಶುಭರಾತ್ರಿ!!
