ಇಬ್ಬರು ಮಿತ್ರರು

ಒಂದು ಸಣ್ಣ ಊರಿನಲ್ಲಿ ರಮೇಶ್ ಮತ್ತು ನಿತೀಶ ಎಂಬ ಇಬ್ಬರು ಹುಡುಗರು ಆತ್ಮೀಯ ಮಿತ್ರರಾಗಿದ್ದರು. ಅವರು ಒಬ್ಬರಿಲ್ಲದೆ ಮತ್ತೊಬ್ಬರು ಇರುವುದೇ ಕಷ್ಟ. ಸಂತೋಷದ ಕ್ಷಣಗಳಾಗಲಿ, ದುಃಖದ ಸಂದರ್ಭಗಳಾಗಲಿ — ಎಲ್ಲವನ್ನೂ ಪರಸ್ಪರ ಹಂಚಿಕೊಂಡು ಬದುಕುತ್ತಿದ್ದ ಮಿತ್ರರು ಅವರು. ಆದರೆ ಅವರಿಬ್ಬರ ನಡುವೆ ಒಂದು ವ್ಯತ್ಯಾಸ ಇತ್ತು. ನಿತೀಶ ಓದಿನಲ್ಲಿ ಬಹಳ ಚುರುಕಾಗಿದ್ದರೆ, ರಮೇಶ್ಗೆ ಓದಿನ ಬಗ್ಗೆ ಆಸಕ್ತಿಯೇ ಇರಲಿಲ್ಲ.

ರಮೇಶ್ ಬೇಗ ಕೋಪಗೊಳ್ಳುವ ಸ್ವಭಾವದವನು; ನಿತೀಶ ಮಾತ್ರ ಮೃದು ಮನಸ್ಸಿನ, ಸಹನಶೀಲ ಹುಡುಗ. ಒಂದು ದಿನ ನಿತೀಶ ರಮೇಶ್ನನ್ನು ಪ್ರೀತಿಯಿಂದ ಕೇಳಿದನು: “ನೀನು ಸಹ ನನ್ನಂತೆ ಓದಿನಲ್ಲಿ ಆಸಕ್ತಿ ತೋರಿಸಬಾರದೇ?” ಅದಕ್ಕೆ ರಮೇಶ್ ನಿಸ್ಸಹಾಯಕವಾಗಿ ಉತ್ತರಿಸಿದನು: “ಅದು ನನ್ನಿಂದಾಗುವುದಿಲ್ಲ. ಓದಿನ ಕಡೆ ಮನಸ್ಸೇ ಹೋಗುವುದಿಲ್ಲ.” ನಿತೀಶ ಮತ್ತೆ ಕೇಳಿದನು: “ಹಾಗಾದರೆ ನಿನ್ನ ತಂದೆತಾಯಿಯನ್ನು ಸಂತೋಷಪಡಿಸಲು ಇಷ್ಟವಿಲ್ಲವೇ?” ಈ ಮಾತು ಕೇಳಿ ರಮೇಶ್ ಸ್ವಲ್ಪ ಕ್ಷಣ ಮೌನವಾಗಿದ್ದ. ನಂತರ ನಿಧಾನವಾಗಿ ಹೇಳಿದನು:“ಇಷ್ಟವೇ ಇದೆ… ಆದರೆ ಮೊದಲ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಾಗಲೇ ನನಗೆ ಓದಿನ ಮೇಲೆ ಆಸಕ್ತಿ ಕಡಿಮೆಯಾಯಿತು.” ಮಿತ್ರನ ನೋವನ್ನು ಅರಿತ ನಿತೀಶ ತಕ್ಷಣ ಹೇಳಿದನು:

“ನಾನು ನಿನಗೆ ಸಹಾಯ ಮಾಡುತ್ತೇನೆ. ನನ್ನ ಜೊತೆ ಕುಳಿತು ಓದು. ನನಗೆ ಗೊತ್ತಿರುವುದನ್ನೆಲ್ಲ ನಿನಗೆ ಕಲಿಸುತ್ತೇನೆ.” ಆ ದಿನದಿಂದ ರಮೇಶ್ ಪ್ರತಿದಿನ ನಿತೀಶನ ಜೊತೆ ಕುಳಿತು ಓದಲು ಆರಂಭಿಸಿದನು. ನಿಧಾನವಾಗಿ ಅವನ ಮನಸ್ಸಿನಲ್ಲಿ ಓದಿನ ಬಗ್ಗೆ ಹೊಸ ಆಸಕ್ತಿ ಮೂಡತೊಡಗಿತು. ಇಬ್ಬರೂ ಮಿತ್ರರು ಒಟ್ಟಾಗಿ ಮನಸ್ಸಿಟ್ಟು ಓದಿದರು.ಕೆಲವು ದಿನಗಳ ನಂತರ ಪರೀಕ್ಷೆ ಬಂದಿತು. ಫಲಿತಾಂಶದ ದಿನ ಇಬ್ಬರೂ ಒಳ್ಳೆಯ ಅಂಕಗಳನ್ನು ಪಡೆದು ಸಂತೋಷಪಟ್ಟರು.

ರಮೇಶ್ ಕೃತಜ್ಞತೆಯಿಂದ ನಿತೀಶನ ಕೈ ಹಿಡಿದು ಹೇಳಿದನು: “ನಿನ್ನ ಸಹಾಯ ಇಲ್ಲದಿದ್ದರೆ ನಾನು ಇಷ್ಟು ಮುಂದೆ ಬರಲಾಗುತ್ತಿರಲಿಲ್ಲ. ನಿನಗೆ ಎಷ್ಟು ಧನ್ಯವಾದಗಳು ಹೇಳಿದರೂ ಸಾಲದು ಗೆಳೆಯ!” ಆ ದಿನದಿಂದ ರಮೇಶ್ ಒಂದು ಮಹತ್ವದ ಪಾಠ ಕಲಿತನು —
“ ಹಂಚಿದಷ್ಟು ಜ್ಞಾನ ಹೊಳೆಯುತ್ತದೆ, ಮುಚ್ಚಿಟ್ಟ ಜ್ಞಾನ ಕೊಳೆಯುತ್ತದೆ “.
