ಕ್ರೀಡಾಚೇತನ
ಕ್ರೀಡೆ ಎಂದರೆ ಕೇವಲ ಆಟವಲ್ಲ. ಅದು ಜೀವನವನ್ನು ರೂಪಿಸುವ ಪಾಠ, ಸ್ನೇಹವನ್ನು ಗಟ್ಟಿಗೊಳಿಸುವ ಸೇತುವೆ, ಧೈರ್ಯ ಮತ್ತು ಶಿಸ್ತು ಬೆಳೆಸುವ ಪಾಠಶಾಲೆ. ನಮ್ಮ ಶಾಲೆಯ ವಾರ್ಷಿಕ ಕ್ರೀಡಾಚೇತನ; ೨೦೨೫–೨೬ ನನಗೆ ಮರೆಯಲಾರದ ನೆನಪುಗಳನ್ನು ಕೊಟ್ಟಿತು.

೨೧ನೇ ಆಗಸ್ಟ್ನಂದು ನಮ್ಮ ಶಾಲೆಯ ಮೈದಾನ ಹಬ್ಬದ ವಾತಾವರಣದಲ್ಲಿತ್ತು. ಮೊದಲ ಆಟ “ಓಟದ ಸ್ಪರ್ಧೆ”. ಸೀಟಿ ಊದಿದ ಕ್ಷಣ ನನ್ನ ಹೃದಯ ತಡಕಾಡುತ್ತಿದ್ದರೂ ಧೈರ್ಯದಿಂದ ಓಡಿದೆ. ಮಧ್ಯೆ ಬಿದ್ದರೂ ಹಿಂತಿರುಗದೆ ಮೂರ್ನಾಲ್ಕು ಜನರನ್ನು ಹಿಂದಿಕ್ಕಿ ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ ಪಡೆದೆನು.
ನಂತರದ ಸೆಮಿಫೈನಲ್ನಲ್ಲಿ ನಾನು, ಅವ್ಯಯ, ಅಚಿಂತ್ಯ ಸ್ಪರ್ಧಿಸಿದ್ದೆವು. ಅವ್ಯಯ ಮತ್ತು ನಾನು ಅಂತಿಮ ಸುತ್ತಿಗೆ ಆಯ್ಕೆಯಾದೆವು. ಕೊನೆಗೂ ಅಂತಿಮದಲ್ಲಿ ನಾನು ಮೂರನೇ ಸ್ಥಾನ ಪಡೆದಿದ್ದರೂ ನನ್ನೊಳಗಿನ ಆತ್ಮವಿಶ್ವಾಸವೇ ನಿಜವಾದ ಜಯವಾಯಿತು.
ಮತ್ತೊಂದು ಆಟ “ಒಬ್ಸ್ಟಕಲ್ ಓಟ”. ಇಲ್ಲಿ ನಾನು ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದೆನು. ನನ್ನ ಜೀವನದಲ್ಲೇ ಮೊದಲ ಬಾರಿಗೆ ಬೆಳ್ಳಿ ಪದಕ ತೊಟ್ಟ ಕ್ಷಣ ಇನ್ನೂ ಕಣ್ಣು ಮುಂದೆ ತೇಲುತ್ತಿದೆ.

೨೨ನೇ ಆಗಸ್ಟ್ ಇನ್ನೂ ಉತ್ಸಾಹ ತುಂಬಿದ ದಿನ. ಮೊದಲ ಆಟ “ಫುಟ್ಬಾಲ್ ಡ್ರಿಬ್ಲಿಂಗ್” ನಲ್ಲಿ ಸೆಮಿಫೈನಲ್ ವರೆಗೂ ಬಂದರೂ ಸೋಲಿಗೆ ತಲೆಬಾಗಬೇಕಾಯಿತು. ಆದರೆ ಸೋಲೂ ನನಗೆ ಹೊಸ ಪಾಠ ಕಲಿಸಿತು. ನಂತರ “ಬ್ಯಾಸ್ಕೆಟ್ಬಾಲ್ ಡ್ರಿಬ್ಲಿಂಗ್” ಮತ್ತು “ರೋಲಿಂಗ್ ದ ಬಾಲ್” ಎರಡರಲ್ಲೂ ನಾನು ಮೊದಲ ಸ್ಥಾನ ಪಡೆದು ಎರಡು ಚಿನ್ನದ ಪದಕ ಗೆದ್ದೆನು. ಆನಂದದಿಂದ ಸ್ನೇಹಿತರನ್ನು ಅಪ್ಪಿಕೊಂಡ ಕ್ಷಣವೇ ನನಗೆ ಸ್ಮರಣೀಯ.
ಮಧ್ಯಾಹ್ನದಲ್ಲಿ ತಂಡಗಳ ನಡುವೆ ಪಂದ್ಯಗಳು ನಡೆದವು. ನಾನು ನನ್ನ “ಓಜಸ್” ತಂಡ ಲಗೋರಿ ಪಂದ್ಯದಲ್ಲಿ ಸೋತರೂ, ಫುಟ್ಬಾಲ್ನಲ್ಲಿ ಅದ್ಭುತ ಗೆಲುವು ಸಾಧಿಸಿತು. ನಮ್ಮ ತಂಡದ ಕೂಗು, ಸಂಭ್ರಮ ಇನ್ನೂ ಕಿವಿಯಲ್ಲಿ ಮೊಳಗುತ್ತಿದೆ.

ಈ ಎರಡು ದಿನಗಳ ಕ್ರೀಡಾಕೂಟ ನನಗೆ ಪದಕಗಳಷ್ಟೇ ಅಲ್ಲ, ಅನೇಕ ಪಾಠಗಳನ್ನು ಕಲಿಸಿತು. ಕ್ರೀಡೆಗಳು ಸ್ನೇಹ, ಸಹಕಾರ, ಶಿಸ್ತು, ಧೈರ್ಯಗಳ ಬಣ್ಣದ ಹಬ್ಬ. ಗೆಲುವು–ಸೋಲುಗಳು ಆಟದ ಒಂದು ಭಾಗ. ಆದರೆ ಪಾಲ್ಗೊಳ್ಳುವುದೇ ನಿಜವಾದ ಜಯ ಎಂಬುದನ್ನು ನಾನು ಮನದಾಳದಿಂದ ಅರ್ಥ ಮಾಡಿಕೊಂಡೆ.

ಈ ವರ್ಷದ ಕ್ರೀಡಾಚೇತನ ನನ್ನ ಜೀವನದ ಒಂದು ಪ್ರೇರಣಾದಾಯಕ ಅಧ್ಯಾಯವಾಗಿದೆ. ಪದಕಗಳು ಮಾಯವಾಗಬಹುದು, ಆದರೆ ಸ್ನೇಹಿತರ ನಗು, ಆಟದ ಸಂಭ್ರಮ, ಜೀವನ ಪಾಠಗಳು ಸದಾ ನನ್ನ ಹೃದಯದಲ್ಲಿ ಉಳಿಯುತ್ತವೆ.
