ನನ್ನ ಪ್ರೀತಿಯ ಶಾಲೆ — ನನ್ನ ಮನದ ಗೂಡು

ನಾನು ಮೊದಲ ಬಾರಿಗೆ ಪೂರ್ಣ ಚೇತನ ಶಾಲೆಗೆ ಕಾಲಿಟ್ಟ ದಿನ ಇನ್ನೂ ನನ್ನ ಮನದಲ್ಲಿ ಹಾಗೆ ಉಳಿದಿದೆ. ಹೊಸ ಮುಖಗಳು, ಹೊಸ ತರಗತಿ, ಹೊಸ ವಾತಾವರಣ… ಅದರ ನಡುವೆ ನಾನು. ಆದರೆ ನಾನು ಕಾಲಿಟ್ಟ ಕ್ಷಣದಲ್ಲೇ ಈ ಶಾಲೆ ನನಗೆ “ಚಿಂತಿಸಬೇಡ, ಇಲ್ಲಿ ನೀನು ಬೆಳೆಯುವುದು ನಿಶ್ಚಿತ”ಎಂದು ಹೇಳಿದಂತಿತ್ತು.

ಆ ದಿನ ನನ್ನ ಜೀವನದಲ್ಲಿ ಮತ್ತೊಬ್ಬ ಗೆಳತಿ ಅಮೂಲ್ಯ ಸಹ ಬಂದಳು— ಸಾನ್ವಿತ, ನನ್ನ ಮೊದಲ ಗೆಳತಿ. ಅವಳ ಸ್ನೇಹ ನನಗೆ ಮಳೆಯ ದಿನದಲ್ಲಿ ಸೂರ್ಯರಶ್ಮಿಯಂತೆ. ಓದಿನಲಿ ಸಹಾಯ ಬೇಕಾದರೂ, ಆಟದಲ್ಲಿ ನನಗೆ ತಂಡ ಬೇಕಾದರೂ, ಅವಳು ಯಾವತ್ತೂ ನನ್ನ ಜೊತೆಗೇ ನಿಂತಳು. ಎಂತಹ ವಿಷಯವಿದ್ದರೂ ಅವಳಿಗೆ ನಾನು ಮನಬಿಚ್ಚಿ ಹೇಳಬಹುದಿತ್ತು.
ಶಾಲೆಯ ಶಿಕ್ಷಕರು ನನಗೆ ಕಂಡ ಅತಿದೊಡ್ಡ ಬೆಂಬಲದ ಕೈಗಳು. ಅವರಿಗೆ ಓದನ್ನು ಮಾತ್ರ ಕಲಿಸುವುದಲ್ಲ ನಮ್ಮನ್ನು ಪ್ರತಿ ದಿನ ಉತ್ತಮ ಮನುಷ್ಯರನ್ನಾಗಿ ರೂಪಿಸುವ ಶಕ್ತಿ ಇದೆ. ಅವರ ಪ್ರೋತ್ಸಾಹ, ಅವರ ನಗೆ, ಅವರ ಮಾತುಗಳು— ನನ್ನ ಆತ್ಮವಿಶ್ವಾಸವನ್ನೇ ಬಲಪಡಿಸಿದವು.

ಈ ಶಾಲೆಗೆ ಬಂದ ಮೇಲೆ ನನ್ನ ಓದಿನಲ್ಲಿ ಹೊಸ ಬೆಳಕು ಹರಡಿದಂತಾಯಿತು. ಕ್ರೀಡಾಕೂಟದಲ್ಲಿ ಗೆದ್ದ ಪದಕಗಳು, ಕಾರ್ಯಕ್ರಮಗಳಲ್ಲಿ ಹೇಳಿದ ಪ್ರಶಂಸೆ, ಶಿಕ್ಷಕರ ಕಣ್ಣಿನಲ್ಲಿ ಕಾಣುತ್ತಿದ್ದ ಹೆಮ್ಮೆಯ ಬೆಳಕು.
ಇವೆಲ್ಲ ನನ್ನ ಪಯಣಕ್ಕೆ ಚೈತನ್ಯ ತುಂಬಿದವು. ನನ್ನ ಬಗ್ಗೆ ಎಲ್ಲರೂ ಕಾಳಜಿವಹಿಸುವ ಈ ಶಾಲೆಯಲ್ಲಿ “ಹೊಸ ಹುಡುಗಿ” ಎಂಬ ಪದಕ್ಕೆ ಸ್ಥಾನವಿಲ್ಲ. ಎಲ್ಲರೂ ನನ್ನನ್ನು ತಮ್ಮವಳಂತೆ ಆಸರೆ ಕೊಟ್ಟು, ನನ್ನ ಜೊತೆ ಆಟವಾಡಿ, ಮಾತನಾಡಿ, ನಗೆ ಹಂಚಿಕೊಂಡರು. ನಾನು ದುಃಖದಿಂದ ಕುಗ್ಗಿದಾಗ ಗೆಳತಿಯರ ಕೈ ನನ್ನ ಬೆನ್ನಿಗೆ ತಾಕಿ,“ಬಾ, ಎಲ್ಲ ಸರಿ ಆಗುತ್ತೆ” ಎಂದು ಹೇಳುವ ಕ್ಷಣಗಳು ನನಗೆ ಅಪಾರ ಬಲ ಕೊಟ್ಟಿವೆ. ಇಲ್ಲಿ ನನಗೆ ಸಿಗುವ ಅವಕಾಶಗಳು ಮುಗಿಲಿಗಿಂತ ಎತ್ತರ. ಪ್ರತೀ ದಿನ ಹೊಸದನ್ನು ಕಲಿಯುವ, ಹೊಸ ಅನುಭವಗಳನ್ನು ಗಳಿಸುವ, ಹೊಸತನ್ನು ಕಂಡು ಹಿಡಿಯುವ ಬಾಗಿಲು ತೆರೆದಂತಿದೆ. ಈ ಶಾಲೆಯು ಕೇವಲ ಪಾಠ ಹೇಳುವುದಲ್ಲ. ಮೌಲ್ಯಗಳನ್ನು ಬೋಧಿಸುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೀಪ ಹಚ್ಚುವ ಗೌರವ ನನಗೆ ದೊರೆತಾಗ “ನನ್ನಲ್ಲಿ ಏನೋ ವಿಶೇಷತೆ ಇದೆ”ಎಂದು ನನಗೆ ಹೆಮ್ಮೆಆವರಿಸಿತು.

ಇಲ್ಲಿ ದೇವರ ಭಕ್ತಿ, ಸಂಸ್ಕೃತಿ, ಪರಿಸರ ಪ್ರೀತಿ, ಎಲ್ಲವನ್ನೂ ಮನದಲ್ಲಿ ನೇಯ್ದಂತೆ ಬೆಳೆಸುತ್ತಾರೆ. ಜನ್ಮದಿನದಂದು ಸಣ್ಣ ಗಿಡವನ್ನು ಕೊಡುವ ಸಂಪ್ರದಾಯ—ಅದು ಕೇವಲ ಗಿಡವಲ್ಲ, “ಈ ಭೂಮಿಗೆ ನೀನೂ ಒಂದು ಜವಾಬ್ದಾರಿ” ಎಂದು ಹೇಳುವ ಮೌನ ಸಂದೇಶ.

ಈ ಶಾಲೆಯ ಪ್ರತಿಯೊಬ್ಬರೂ ನಂಬಿಕೆಯ ಮುತ್ತುಗಳು. ಮಾತು ಹೇಳಿದರೆ ಹೃದಯದಲ್ಲಿ ಇಟ್ಟುಕೊಳ್ಳುವ ಮನುಷ್ಯರು. ಇಲ್ಲಿ ನಾನು ಎಂದಿಗೂ ಒಂಟಿಯಾಗಿರುವುದಿಲ್ಲ.ಇಷ್ಟು ಬಾಳನ್ನು ಬದಲಿಸಿದ ಈ ಸ್ಥಳವೇ ನನಗೆ ಎರಡನೇ ಮನೆ. ಇಲ್ಲಿ ಸಿಕ್ಕ ಸ್ನೇಹ, ಸಿಕ್ಕ ಪಾಠ, ಸಿಕ್ಕ ಪ್ರೀತಿ—ಇವೆಲ್ಲ ನನ್ನ ಮನದಲ್ಲಿ ಶಾಶ್ವತವಾಗಿ ಉಳಿಯುವ ನೆನಪುಗಳು. ನನಗೆ ನನ್ನ ಶಾಲೆ ಎಂದರೆ ತುಂಬಾ ಪ್ರೀತಿ. ಇದೇ ನನ್ನ ನಿಜವಾದ ಚೇತನ ಅದುವೇ ನನ್ನ ಪೂರ್ಣ ಚೇತನ.
