ಕರಡಿ ಮತ್ತು ಹಲಸಿನ ಮರ

ಒಂದಾನೊಂದು ಕಾಲದಲ್ಲಿ ದಟ್ಟವಾದ ಹಸಿರು ಅರಣ್ಯದಲ್ಲಿ ಒಂದು ದಯಾಳು ಕರಡಿ ವಾಸಿಸುತ್ತಿತ್ತು. ಆ ಕಾಡಿನಲ್ಲಿ ಹಲವು ಪ್ರಾಣಿಗಳು—ಕೆಲವು ಸ್ನೇಹಪರ, ಕೆಲವು ಘಾತಕ ಪ್ರಾಣಿಗಳು ಇದ್ದವು. ಕರಡಿ ಯಾವಾಗಲೂ ಎಲ್ಲರೊಂದಿಗೆ ಸ್ನೇಹದಿಂದ ಇರುತ್ತಿತ್ತು.ಒಂದು ದಿನ ಕರಡಿ ಗಾಢ ನಿದ್ರೆಯಲ್ಲಿ ಮಲಗಿದ್ದಾಗ, ಗಾಳಿಯಲ್ಲಿ ತೇಲಿಕೊಂಡು ಬಂದ ಒಂದು ಮಧುರ ಸುವಾಸನೆ ಅದರ ಮೂಗಿನ ತುದಿಯನ್ನು ತಟ್ಟಿತು.“ಏನು ಈ ಸುಗಂಧ? ಬಹಳ ಮಧುರವಾಗಿದೆ!” ಎಂದು ಕರಡಿ ಕುತೂಹಲದಿಂದ ಎದ್ದು, ಆ ವಾಸನೆ ಬಂದ ದಿಕ್ಕಿಗೆ ಓಡತೊಡಗಿತು.

ಸ್ವಲ್ಪ ಸಮಯದ ಬಳಿಕ ಅದಕ್ಕೆ ಒಂದು ಎತ್ತರದ, ಗಟ್ಟಿಯಾದ ಹಲಸಿನ ಮರ ಕಾಣಿಸಿತು. ಮರದ ಕೊಂಬೆಗಳಲ್ಲಿ ದಪ್ಪದ, ಹಳದಿಹಣ್ಣುಗಳು ಬಂಗಾರದ ಹಣ್ಣಿನಂತೆ ಮಿನುಗುತ್ತಿವೆ.“ಅಹಾ! ఇದೆ ಆ ಸುವಾಸನೆ!” ಎಂದು ಕರಡಿ ಹಣ್ಣನ್ನು ನೋಡುತ್ತಾ ಸಂತೋಷಪಟ್ಟಿತು.

ಕರಡಿ ಸಂತೋಷದಿಂದ ಒಂದು ಹಣ್ಣನ್ನು ಕಿತ್ತು ತಿನ್ನಲು ಪ್ರಯತ್ನಿಸುತ್ತಿದ್ದಾಗ, ಅಚಾನಕ್ಕಾಗಿ ಒಂದು ಮೃದುವಾದ, ಚಿಕ್ಕ ಧ್ವನಿ ಕೇಳಿಸಿತು— “ಅಯ್ಯೋ ಕರಡಿ! ತುಂಬಾ ಹಣ್ಣುಗಳನ್ನು ಕೀಳಬೇಡ. ನನ್ನ ಕೊಂಬೆಗಳು ಖಾಲಿಯಾಗಿಬಿಡುತ್ತವೆ. ನನ್ನ ಸೌಂದರ್ಯವೂ ಹಾಳಾಗುತ್ತದೆ,” ಎಂದು ಹಲಸಿನ ಮರ ಹೇಳಿತು.
ಕರಡಿ ನಕ್ಕು, ಮೃದುವಾಗಿ ಹೇಳಿತು, “ಸ್ನೇಹಿತನೇ, ಇದು ಪ್ರಕೃತಿಯ ಕೊಡುಗೆ ಇತರರೊಂದಿಗೆ ಹಂಚಿಕೊಳ್ಳಬೇಕು. ಅತಿಯಾದ ಸ್ವಾರ್ಥ ಎಲ್ಲರಿಗೂ ಕೆಡಕು ಉಂಟಾಗುತ್ತದೆ. ನೀನು ಹೀಗೆ ವರ್ತಿಸಿದರೆ ನಿನಗೇ ಹಾನಿಯಾಗಬಹುದು.”
ಆದರೆ ಹಲಸಿನ ಮರ ತಕ್ಷಣ ಉತ್ತರಿಸಿತು,“ಇಲ್ಲ! ನನಗೆ ಹೀಗೆ ಅನಿಸುವುದಿಲ್ಲ. ನೀನು ಈಗಲೇ ಹೊರಟು ಹೋಗು.” ಎಂದಿತು ಕರಡಿಯ ಮನಸ್ಸಿಗೆ ನೋವಾಯಿತು. ಅದು ಮಂದಹಾಸವಿಟ್ಟು, “ಸರಿ, ನಿನಗೆ ಬೇಕಾದಂತೆ ಆಗಲಿ,” ಎಂದು ಹೇಳಿ ಹಿಂತಿರುಗಿತು.

ಕೆಲ ದಿನಗಳ ಬಳಿಕ ಕಾಡಿಗೆ ಭಾರೀ ಮಳೆ ಬಂದುಹೋಯಿತು. ಹಣ್ಣುಗಳನ್ನು ರಕ್ಷಿಸಿಕೊಳ್ಳಲು ಮರ ಯತ್ನಿಸಿದರೂ ಸಾಧ್ಯವಾಗಲಿಲ್ಲ. ಹಲವು ಹಣ್ಣುಗಳು ನೆಲಕ್ಕೆ ಬಿದ್ದು ಕೊಳೆತುಹೋದವು. ಇತರ ಮರಗಳು ಹಲಸಿನ ಮರವನ್ನು ಆಡಿಕೊಳ್ಳತೊಡಗಿದವು— “ನಿನ್ನ ಸ್ವಾರ್ಥವೇ ನಿನಗೆ ಇಂದು ಕೇಡು ತಂದಿದೆ!”ಆಗ ಹಲಸಿನ ಮರಕ್ಕೆ ತನ್ನ ತಪ್ಪು ಸ್ಪಷ್ಟವಾಗಿ ತಿಳಿಯಿತು. ಅದು ಪಶ್ಚಾತ್ತಾಪದಿಂದ ಕರಡಿಯನ್ನು, “ಕ್ಷಮಿಸು ಸ್ನೇಹಿತಾ. ನಾನು ಆಗ ಸ್ವಾರ್ಥದಿಂದ ವರ್ತಿಸಿದೆ. ಹಂಚಿಕೊಳ್ಳುವ ಮಹತ್ವವನ್ನು ಈಗ ತಿಳಿದಿದ್ದೇನೆ,” ಎಂದು ಕೇಳಿಕೊಂಡಿತು.

ಕರಡಿ ಮೃದುವಾಗಿ ನಗುತ್ತಾ,“ಕ್ಷಮೆಯಾಚಿಸಿದವನೇ ದೊಡ್ಡವನು. ನಾನು ನಿನ್ನನ್ನು ಕ್ಷಮಿಸುತ್ತೇನೆ,” ಎಂದು ಮರಕ್ಕೆ ಅಪ್ಪುಗೆಯಂತೆ ತನ್ನ ಪಂಜವನ್ನು (ಪಾದ )ಮೃದುವಾಗಿ ತೋರಿಸಿತು.
ಆ ದಿನದಿಂದ ಹಲಸಿನ ಮರ ಎಲ್ಲರೊಂದಿಗೆ ಸ್ನೇಹದಿಂದ, ಹಣ್ಣುಗಳನ್ನು ಹಂಚಿಕೊಳ್ಳುತ್ತ ಬದುಕಲು ಕಲಿತುಕೊಂಡಿತು.
ನೀತಿ : ಅಗತ್ಯಕ್ಕಿಂತ ಹೆಚ್ಚಾಗಿ ಸ್ವಾರ್ಥಿಯಾಗುವುದು ಒಳ್ಳೆಯದಲ್ಲ. ಹಂಚಿಕೊಳ್ಳುವುದು ನಮಗೆ ಸ್ನೇಹ, ಸಂತೋಷ ಮತ್ತು ಗೌರವ ತರುತ್ತದೆ.
