ಕನ್ನಡ ಕವನ ತಂದ ಹರ್ಷ

ಕಛೇರಿಯ ಕೆಲಸ ಮುಗಿಸಿ ಬೆಂಗಳೂರಿನಿಂದ ಮೈಸೂರಿಗೆ ಬರುವಾಗ ಮನೆಯಾಕೆಯಿಂದ ರಾತ್ರಿ 07:30 ಕ್ಕೆ ಒಂದು ದೂರವಾಣಿ ಕರೆ ನಿಮಗೊಂದು ವಾಟ್ಸಪ್ ಮಾಡಿದ್ದೇನೆ ನೋಡಿ ಎಂಬ ಸಂದೇಶ! ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿರುವ ಮಗನಿಗೆ ಅವರ ಕನ್ನಡ ಶಿಕ್ಷಕರು ಕನ್ನಡದ ಬಗ್ಗೆ ಅದರ ಹೆಮ್ಮೆ, ಭಾಷೆಯ ಮಹತ್ವ, ಕನ್ನಡವನ್ನು ಏಕೆ ಬಳಸಬೇಕು? ಎಂಬುದರ ಕುರಿತು ಒಂದೆರಡು ಪ್ಯಾರದಲ್ಲಿ ಪದ್ಯ ಅಥವಾ ಕವನ ರಚನೆ ಮಾಡಬೇಕು ಎಂಬುದು ಅಂದಿನ ಕನ್ನಡ ಪಠ್ಯದ ಮನೆಗೆಲಸ.
ಮನೆಯವಳಿಗೆ ಆತಂಕ ಈ ಮಗುವಿನ ಕೈಯಲ್ಲಿ ಕನ್ನಡದ ಕವನ ಬರೆಸುವುದು ಹೇಗೆ? ಶಾಲೆಯ ನಿತ್ಯದ ಚಟುವಟಿಕೆ ಮಾಡಿಸಲೇ ಮನೆಯಲ್ಲಿ ಸಾಹಸ ಮಾಡಬೇಕು ಇನ್ನು ಈ ಕವನ, ಕಾದಂಬರಿ, ಪ್ರಾಜೆಕ್ಟ್, ಅಸೈನ್ಮೆಂಟ್, ಮಾಡೆಲ್ ಇವೆಲ್ಲ ಮಾಡಿಸಲು ಸಮಯ ಬೇಕು ನೀವು ಬರುವುದು ಇನ್ನು ಎಷ್ಟು ಹೊತ್ತು ಎಂಬ ಪ್ರಶ್ನೆಗಳ ಸುರಿಮಳೆ. ಸಾಫ್ಟ್ವೇರ್ ಇಂಜಿನಿಯರ್ ಆದ ನನಗೆ ಮಗ ಕನ್ನಡದ ಬಗ್ಗೆ ಒಂದು ಕವನ ಬರೆಯಬೇಕು ಎಂದು ಕೇಳಿದ ತಕ್ಷಣ ಮನಸ್ಸಿನಲ್ಲಿ ಹರ್ಷ, ಆನಂದ , ಖುಷಿ ಎಲ್ಲವೂ ಒಟ್ಟಿಗೆ.

ಆಂಗ್ಲಮಾಧ್ಯಮ ಶಾಲೆಯ ಮಕ್ಕಳು, ನಮ್ಮ ಉದ್ಯೋಗ ಕ್ಷೇತ್ರದಲ್ಲಿ, ಬೆಂಗಳೂರಿನಲ್ಲಿ ನಾವು ಕೇಳುವ ನಿತ್ಯ ವಾಕ್ಯ “ ಕನ್ನಡ್ ಗೊತ್ತಿಲ್ಲ”. ಕನ್ನಡ ಗೊತ್ತಿದ್ದರು , ಕನ್ನಡದವರೇ ಆದರೂ ಕನ್ನಡ ಬಳಸಲು ಹಿಂಜರಿಕೆ, ಇಂಗ್ಲಿಷ್ ಮಾತನಾಡಿದರೆ ದೊಡ್ಡಸ್ಥಿಕೆ ಎಂಬ ಮನಸ್ಥಿತಿಯ ಜನರನ್ನು ಸದಾ ನೋಡುವ ನಮಗೆ ಸಿ.ಬಿ.ಎಸ್.ಸಿ ಶಿಕ್ಷಣ ನೀಡುತ್ತಿರುವ ಆಂಗ್ಲಮಾಧ್ಯಮ ಶಾಲೆ ಮೈಸೂರಿನ ಪೂರ್ಣ ಚೇತನ ಶಾಲೆ ಪಠ್ಯೇತರವಾಗಿ ಕನ್ನಡದ ಬಗ್ಗೆ ಮಕ್ಕಳಿಗೆ ಕವನ ರಚನೆ ಮಾಡಿ ಎಂದು ತಿಳಿಸಿರುವುದು ಅದೆಷ್ಟು ಪ್ರಸ್ತುತ ಎನಿಸಿತು. ಶಾಲೆಯಲ್ಲಿ ಕನ್ನಡದ ಬಗ್ಗೆ ಕವಿತೆ ಬರೆಯಲು ಮನೆಗೆಲಸ ನೀಡಿದ್ದಾರೆ!! ಕನ್ನಡದ ಬಗ್ಗೆ ಮಕ್ಕಳಿಗೆ ಪೋಷಕರಿಗೆ ತಿಳಿಸಲು ಶಾಲೆಯು ನೀಡಿದ ಕನ್ನಡದ ಕವನ ಬರವಣಿಗೆ ಕನ್ನಡದ ಬಗ್ಗೆ ತಿಳಿಸಲು ಬಳಸಲು ಬೆಳೆಸಲು ಸುಲಭ ಮಾರ್ಗವನ್ನಿಸಿತು ನನ್ನ ಮನಸ್ಸಿಗೆ.
ಕನ್ನಡ ಭಾಷೆಯೇ ಆಗಲಿ ಬೇರಾವುದೇ ಭಾಷೆಯೇ ಆಗಲಿ ಕಲಿಸುವ ಮೊದಲು ಮಕ್ಕಳಿಗೆ ಅದರ ಬಗ್ಗೆ ಆಸಕ್ತಿ ಮೂಡಿಸಬೇಕು. ಆಸಕ್ತಿ ಬಂದರೆ ತಮಗೆ ತಾವೆ ಅದನ್ನು ಕಲಿಯುತ್ತಾರೆ. ಅದನ್ನು ಬೆಳೆಸುವ ಕೆಲಸ ಪೋಷಕರದ್ದು ಶಾಲೆಯ ಶಿಕ್ಷಕರದ್ದು. ಕೆಲವರಿಗೆ ಈ ಕನ್ನಡದ ಕವನ ಬರೆಯುವ ಮೆನೆಗೆಲಸ ಒಂದು ಸಣ್ಣ ವಿಚಾರ, ನಿರ್ಲಕ್ಷಿಸಬಹುದಾದ ಅಸೈನ್ ಮೆಂಟ್ ಅನ್ನಿಸಬಹುದು, ಇನ್ನು ಕೆಲವರಿಗೆ ಮಕ್ಕಳು ಈ ಕವನವೆಲ್ಲ ಬರೆಯುವುದು ಏತಕ್ಕೆ ಎಂದೂ ಅನ್ನಿಸಿರಬಹುದು. ಆದರೆ ಕಾರ್ಪೋರೇಟ್ ಎಂಬ ಮಹಾ ದೈತ್ಯ ಕಂಪನಿಗಳಲ್ಲಿ ಕೆಲಸ ಮಾಡುವ ನಮಗೆ ಕನ್ನಡ ಕೇಳಿದರೆ ಕರ್ಣಾನಂದ, ಕರ್ನಾಟಕದಲ್ಲಿ ಕನ್ನಡ ಸಹೋದ್ಯೋಗಿಗಳಿಲ್ಲದೆ ನಾವು ಅನುಭವಿಸುತ್ತಿರುವ ಯಾತನೆ ಅಷ್ಟಿಷ್ಟಲ್ಲ ಆದ್ದರಿಂದ ಮಗನಿಗೆ ಶಾಲೆಯಲ್ಲಿ ನೀಡಿದ ಕನ್ನಡ ಕವನ ಬರೆಯುವ ಹೋಮ್ ವರ್ಕ್ ನಮ್ಮ ವರ್ಕ್ ಟೆನ್ಷನ್ ನನ್ನು ಒಂದು ಕ್ಷಣ ದೂರ ಮಾಡಿತು.

ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಮಗನ ಕೈಯಲ್ಲಿ ಕನ್ನಡ ಕವನ ಬರೆಸುವ ಎಕ್ಸೈಟ್ಮೆಂಟ್ ನಲ್ಲಿ ಏನನ್ನು ಬರೆಯಬೇಕು ಹೇಗೆ ಬರೆಯಬೇಕು ವಿಷಯ ಏನೇನು ಸೇರಿಸಬೇಕು ಪ್ರಾಸವನ್ನು ಹೇಗೆ ಬರೆಯಬೇಕು ಎಂಬುದನ್ನು ಫೋನಿನಲ್ಲಿ ಚರ್ಚಿಸಿ ತಿಳಿಸಿ ಮನೆಗೆ 09:30 ಕ್ಕೆ ಬಂದರೆ ಅಮ್ಮ – ಮಗ ಸೇರಿ ಮೂರು ಪ್ಯಾರದ ಕನ್ನಡದ ಕವನ ರಚಿಸಿದ್ದಾರೆ. ಊಟ ಮುಗಿಸಿ ನಿದ್ದೆಮಾಡದೆ ನನಗಾಗಿ ಕಾದ ಮಗ ರಾತ್ರಿ 10:30 ಕ್ಕೆ ತಾನು ರಚಿಸಿದ ಕನ್ನಡದ ಕವನವನ್ನು ನನ್ನ ಕೈಯಲ್ಲಿ ಇಟ್ಟು ಒಂದು ಸಾರಿ ಓದು ಎಂದು ಹೇಳಿದ. ಓದಿದೆ ಫೋನ್ ನಲ್ಲಿ ಏನೇನು ಹೇಳಿದ್ದೆ ಅದನ್ನು ಅವನ ಬರವಣಿಗೆಯಲ್ಲಿ ನೋಡಿದೆ. ರಫ್ ಪೇಪರ್ ನಲ್ಲಿ ಬರೆದಿದ್ದ ಕವನವನ್ನು ಬೆಳಗ್ಗೆ ನೀಟ್ ಪೇಪರ್ ನಲ್ಲಿ ಬರೆಸಿ ಶಾಲೆಯ ಬಸ್ ಹತ್ತಿಸಿ ಕಳುಹಿಸಿದಾಗ ಆದ ಖುಷಿಯೇ ಬೇರೆ.

ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡದ ತಾತ್ಸಾರ, ಕನ್ನಡ ಬಳಸಿದರೆ ಫೈನ್ ಎಂಬ ಪೆಡಂಭೂತ! ಮನೆಯಲ್ಲಿ, ಶಾಲೆಯಲ್ಲಿ, ಅಂಗಡಿಯಲ್ಲಿ, ಬ್ಯಾಂಕಿನಲ್ಲಿ , ರೈಲಿನಲ್ಲಿ , ಅಲ್ಲಿ ಇಲ್ಲಿ ಎಲ್ಲಿಯೂ ಕಡೆಗೆ ಪಾನಿಪೂರಿ ಅಂಗಡಿಯಲ್ಲೂ ಕನ್ನಡವಿಲ್ಲ ಎಂದು ಪರಿತಪಿಸುವ ನಮಗೆ ಆಂಗ್ಲಮಾಧ್ಯಮದ ಪೂರ್ಣ ಚೇತನ ಶಾಲೆಯು ಮಕ್ಕಳಿಗೆ ಪತ್ರಿಕೆ, ಸಾಹಿತ್ಯ, ಕೃಷಿ, ಕಲೆಗಳಲ್ಲಿ ಕನ್ನಡವನ್ನು ಜೀವಂತ ಇಡುತ್ತಿರುವುದು ನಿಜವಾಗಲು ಸಂತಸ. ಶಾಲೆಯ ಕನ್ನಡ ಶಿಕ್ಷಕ ಶಿಕ್ಷಕಿ ಆಡಳಿತ ಮಂಡಳಿಗೆ ಶರಣು ಶರಣಾರ್ಥಿ!!!.
“ಉತ್ತಮ ಶಿಕ್ಷಕ ರಾಷ್ಟ್ರರಕ್ಷಕ” ಎಂಬ ಉಕ್ತಿಯಂತೆ ಶಿಕ್ಷಕರು ಮನಸ್ಸು ಮಾಡಿದರೆ ಮಾತ್ರ ಮುಂದಿನ ತಲೆಮಾರು ಕನ್ನಡ ಬಳಸುವಂತೆ ಮಾಡಬಹುದು ಎಂಬುದರಲ್ಲಿ ಅನುಮಾನವೇ ಇಲ್ಲ.
