ಹೊಟ್ಟೆಯೊಳಗಿನ ಹಕ್ಕಿಗಳು ಮತ್ತು ನನ್ನ ಮಗಳ ಎವರೆಸ್ಟ್ಸಾ ಸಾಧನೆ!
STAGE FEAR (ಸ್ಟೇಜ್ ಫಿಯರ್) – ನೀವು ಈ ಶಬ್ದವನ್ನು ತುಂಬಾ ಸಾರಿ ಕೇಳಿರ್ತೀರಿ. ತುಂಬಾ ಜನರಿಗೆ ಈ ಸಮಸ್ಯೆ ಇದೆ. ನಂಗಂತೂ ಈಗಲೂ ನಾಲ್ಕು ಜನರ ಮುಂದೆ ಹೋಗಿ ನಿಂತರೆ ಹೊಟ್ಟೆ ಒಳಗಡೆ ಸಾವಿರ ಹಕ್ಕಿಗಳು ಹಾರಿದ ಫೀಲಿಂಗ್! ಚಿಕ್ಕವನಾಗಿದ್ದಾಗ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸೋದಕ್ಕೆ ಹೋಗ್ತಾನೆ ಇರ್ಲಿಲ್ಲ. ಹೇಗೋ ಧೈರ್ಯ ಮಾಡಿ ಏಳನೇ ಕ್ಲಾಸಲ್ಲಿ ನಾಟಕಕ್ಕೆ ಸೇರ್ಕೊಂಡೆ. ಅಜ್ಜನ ಪಾರ್ಟ್ ಕೊಟ್ಟಿದ್ರು, ಹಾಗಾಗಿ ಬೆನ್ನು ಬಗ್ಗಿಸ್ಕೊಂಡೆ ಇರ್ಬೇಕಾಗಿದ್ದ ಪಾತ್ರ ಅದು. ಆದರೆ ವೇದಿಕೆ ಮೇಲೆ ಹೋಗಿ ನಾಟಕ ಆಡ್ಬೇಕಾದ್ರೆ ಭಯದಲ್ಲಿ ಬೆನ್ನು ಬಗ್ಗಿಸೋದು ಮರ್ತೇ ಹೋಗಿತ್ತು!

ನಂಗೆ ಆಗಿದ್ದ ಸಮಸ್ಯೆ ನನ್ನ ಮಗಳಿಗೆ ಆಗಬಾರದು ಅಂತ ಯಾವಾಗ್ಲೂ ಅಂದುಕೊಳ್ತಿದ್ದೆ. ಅದಕ್ಕೆ ನನ್ನ ಹೆಂಡತಿನೂ ಸಾಥ್ ಕೊಟ್ಟಿದ್ಲು. ಯಾವ ಚಿಕ್ಕ ಚಾನ್ಸ್ ಸಿಕ್ಕಿದ್ರು ಬಿಡ್ತಾ ಇರ್ಲಿಲ್ಲ. ಸ್ಟೇಜ್ ಚಿಕ್ಕದು, ದೊಡ್ಡದು ಯಾವುದಾದ್ರೂ ಓಕೆ; ಶ್ಲೋಕ ಪಠಣ, ಹಾಡು, ಛದ್ಮವೇಶ, ಭಾಷಣ ಎಲ್ಲಾನು ಮಾಡ್ಸಿದ್ವಿ. ಒಂದು ಹಂತಕ್ಕೆ ಆ ‘ಸ್ಟೇಜ್ ಫಿಯರ್‘ ಅನ್ನೋ ಕ್ರಿಮಿ ಅವಳ ತಲೆಗೆ ಹತ್ತದ ಹಾಗೆ ಮಾಡೋದ್ರಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ಸು ಸಿಕ್ಕಿತ್ತು. ನಮ್ಮ ಖುಷಿಗೆ ಮಿತಿಯೇ ಇರಲಿಲ್ಲ.

ಸಣ್ಣ ಪುಟ್ಟ ಬೆಟ್ಟ ಟ್ರೆಕ್ಕಿಂಗ್ ಮಾಡಿದ ಹುರುಪಿನಲ್ಲಿ ಸೀದಾ ಎವರೆಸ್ಟ್ ಹತ್ತೋದಕ್ಕೆ ಪ್ರಯತ್ನ ಪಟ್ಟರೆ ಹೇಗಿರುತ್ತೆ? ನಮ್ಮ ಪ್ರಯತ್ನವೂ ಅದೇ ತರ ಇತ್ತು. ಮೂರುವರೆ ವರ್ಷದ, ಇನ್ನು ಯಾವುದೇ ಭಾಷೆಯನ್ನು ಓದಲು ಬಾರದ ಮಗಳಿಗೆ 8 ನಿಮಿಷದ, ನೂರಕ್ಕೂ ಅಧಿಕ ಸಾಲುಗಳಿದ್ದ ‘ಸೀತಾ ಕಲ್ಯಾಣ‘ದ ಕಥೆಯನ್ನು ಪದ್ಯದ ರೂಪದಲ್ಲಿ ನಮ್ಮ ಸಮಾಜದ ವಾರ್ಷಿಕೋತ್ಸವದಲ್ಲಿ ಹಾಡಿಸುವ ಪ್ರಯತ್ನವದು. ಅದೂ ನಮ್ಮ ಮಾತೃಭಾಷೆಯಾದ ಕೊಂಕಣಿಯಲ್ಲಿ! ಅದರಲ್ಲಿ ಎಷ್ಟೋ ಶಬ್ದಗಳನ್ನು ನಾವೇ ಕೇಳಿರಲಿಲ್ಲ. ಇನ್ನು ಅದನ್ನು ನಾವು ಅರ್ಥ ಮಾಡಿಕೊಂಡು ಅವಳಿಗೆ ಹೇಳಿಕೊಡುವುದು ತುಂಬಾ ಚಾಲೆಂಜಿಂಗ್ ಟಾಸ್ಕ್ ಆಗಿತ್ತು. ನಮಗಿದ್ದದ್ದು ಕೇವಲ ಒಂದು ತಿಂಗಳು ಮಾತ್ರ.

ನಮ್ಮ ಪ್ರಯತ್ನ ಪ್ರಾರಂಭವಾಯಿತು. ನಾವು ಇಡೀ ದಿನ ಆ ಪದ್ಯವನ್ನು ಹೇಳೋದು, ಅವಳು ಕೇಳಿಸಿಕೊಳ್ಳೋದು – ಇದೇ ನಮ್ಮ ದಿನಚರಿಯಾಯಿತು. ಲೆಕ್ಕಕ್ಕೆ ಸಿಗದಷ್ಟು ಸಾರಿ ಹೇಳಿದ್ವಿ. ಕೆಲವೇ ದಿನಗಳಲ್ಲಿ ನಮ್ಮ ಮಗಳು ಅರ್ಧದಷ್ಟು ಹಾಡನ್ನು ಹೇಳುವ ಸ್ಥಿತಿಗೆ ತಲುಪಿದ್ದಳು. ಆಗ ನಮಗೆ ‘ಮಾಡಬಹುದು‘ ಅಂತ ಸ್ವಲ್ಪ ಧೈರ್ಯ ಬಂತು. ಹೇಗೋ ಮಾಡಿ ಒಂದು ತಿಂಗಳಲ್ಲಿ ಪೂರ್ತಿ ಹಾಡನ್ನು ಕಲ್ಸಿದ್ವಿ. ಇದರ ಮಧ್ಯದಲ್ಲಿ ತುಂಬಾ ಸಾರಿ ತಾಳ್ಮೆ ಕಳೆದುಕೊಂಡಿದ್ದಿದೆ, ಬೇಜಾರು ಮಾಡ್ಕೊಂಡಿದ್ದಿದೆ, ಹೆಮ್ಮೆ ಪಟ್ಟಿದ್ದಿದೆ, ಆತಂಕ… ಎಲ್ಲಾನೂ ಆಗಿತ್ತು.
ಅಂತಿಮವಾಗಿ ‘ದ ಬಿಗ್ ಡೇ‘ ಬಂದೇ ಬಿಟ್ಟಿತು. ನಮ್ಮದು ಅದೇ ಹಳೆಯ ಕಥೆ; ಮೈಸೂರಲ್ಲಿದ್ದ ಹಕ್ಕಿಗಳೆಲ್ಲ ನಮ್ಮ ಹೊಟ್ಟೆಯಲ್ಲೇ ಹಾರುತ್ತಾ ಇದ್ದವು! ಯಾವುದೇ ತಪ್ಪು ಮಾಡದೇ ಹಾಡಲಿ ಅಂತ ಇರೋ ಬರೋ ದೇವರಿಗೆಲ್ಲ ಪ್ರಾರ್ಥನೆ ಮಾಡಿದ್ವಿ. ನನ್ನ ಮಗಳು ಹಾಡೋದಕ್ಕೆ ಪ್ರಾರಂಭಿಸಿದಳು. ಅವಳ ಅಮ್ಮ ಸ್ಟೇಜ್ ಪಕ್ಕದಲ್ಲಿ ನಿಂತು ಕೇಳಿಸಿಕೊಳ್ತಿದ್ಳು, ನಾನು ಇಬ್ಬರನ್ನೂ ನೋಡ್ತಿದ್ದೆ. ನನ್ನ ಮಗಳ ಮುಖದಲ್ಲಿ ಸ್ಟೇಜ್ ಫಿಯರ್ನ ಲವಲೇಶನೂ ಇರಲಿಲ್ಲ, ಆದರೆ ಅವಳ ಅಮ್ಮನ ಮುಖದಲ್ಲಿ ಭಯವೋ ಭಯ!

ಅಂತಿಮವಾಗಿ ಪ್ರೇಕ್ಷಕರ ದೊಡ್ಡ ಕರತಾಡನದ ನಡುವೆ, ಯಶಸ್ವಿಯಾಗಿ ಒಂದೂ ತಪ್ಪು ಮಾಡದೇ ಹಾಡಿ ಮುಗಿಸಿದ್ದಳು. ಹೀಗೆ ನಾವು ನಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೆವು. ನಮ್ಮಿಬ್ಬರ ಕಣ್ಣಲ್ಲಿ ಆನಂದಬಾಷ್ಪ ಹಾಗೆಯೇ ಇಳಿಯುತ್ತಿತ್ತು. ನಮ್ಮ ಜೀವನದ ಅತ್ಯದ್ಭುತ ಕ್ಷಣಗಳಲ್ಲಿ ಇದೂ ಒಂದು.
ಮಕ್ಕಳಿಗೆ ಆತ್ಮವಿಶ್ವಾಸವನ್ನು ಕೊಡುವುದು ಒಂದು ದಿನದ ಕೆಲಸವಲ್ಲ. ಸಣ್ಣ ಸಣ್ಣ ಅವಕಾಶಗಳನ್ನು ನೀಡುತ್ತಾ, ಅವರ ಜೊತೆ ಹೆಜ್ಜೆ ಹಾಕುತ್ತಾ ಹೋದರೆ, ಒಂದು ದಿನ ಅವರು ತಮ್ಮದೇ ಆದ ಎವರೆಸ್ಟ್ ಶಿಖರವನ್ನು ಏರಿಯೇ ತೀರುತ್ತಾರೆ.
