ಉತ್ತಮ ಶಿಕ್ಷಕ ರಾಷ್ಟ್ರ ರಕ್ಷಕ
ಸೆಪ್ಟೆಂಬರ್ ಬಂತೆಂದರೆ ಭಾರತದ ಪ್ರತಿ ಶಿಕ್ಷಕರಿಗೂ ಹಬ್ಬದ ಸಂಭ್ರಮ. ನಮ್ಮ ಜೀವನದ ಏಳುಬೀಳುಗಳು, ಸೋಲು–ಗೆಲುವುಗಳಲ್ಲಿ ಶಿಕ್ಷಕರ ಪಾತ್ರ ಅಪಾರವಾದುದು. ಜಗತ್ತಿನಾದ್ಯಂತ ಶಿಕ್ಷಕರ ಸೇವೆಯನ್ನು ಸ್ಮರಿಸಲು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಪ್ರಪಂಚದ ಹಲವಾರು ದೇಶಗಳಲ್ಲಿ ಅಕ್ಟೋಬರ್ ತಿಂಗಳಲ್ಲಿ ಈ ದಿನಾಚರಣೆಯನ್ನು ಆಚರಿಸಿದರೆ, ಭಾರತದಲ್ಲಿ 1962ರಿಂದ ನಮ್ಮ ಎರಡನೇ ರಾಷ್ಟ್ರಪತಿಗಳಾದ ಡಾ. ಸರ್ವಪಲ್ಲಿ ರಾಧಕೃಷ್ಣನ್ ಅವರ ಜನ್ಮದಿನದಂದು (ಸೆಪ್ಟೆಂಬರ್ 5) ಆಚರಿಸಿಕೊಂಡು ಬರಲಾಗುತ್ತಿದೆ.

ಡಾ. ಸರ್ವಪಲ್ಲಿ ರಾಧಕೃಷ್ಣನ್ ಅವರ ಸ್ಪೂರ್ತಿದಾಯಕ ಜೀವನ:
1888ರ ಸೆಪ್ಟೆಂಬರ್ 5ರಂದು ತಮಿಳುನಾಡಿನ ತಿರುತ್ತಣಿಯಲ್ಲಿ ಶ್ರೀಯುತ ಸರ್ವಪಲ್ಲಿ ವೀರಸ್ವಾಮಿ ಹಾಗೂ ಸೀತಮ್ಮ ದಂಪತಿಗಳಿಗೆ ಜನಿಸಿದ ರಾಧಕೃಷ್ಣನ್ ಅವರ ಬಾಲ್ಯ ಬಡತನದಿಂದ ಕೂಡಿತ್ತು. ಕುಟುಂಬವು ಅವರನ್ನು ಪುರೋಹಿತರನ್ನಾಗಿ ಮಾಡಲು ಬಯಸಿದರೂ, ಅವರಲ್ಲಿನ ಓದುವ ಹಂಬಲವೇ ಅವರನ್ನು ಈ ಮಟ್ಟಿಗೆ ಏರಿಸಿತು. ಸ್ಕಾಲರ್ಶಿಪ್ ಸಹಾಯದಿಂದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿ, ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ತತ್ವಜ್ಞಾನ ವಿಷಯದಲ್ಲಿ ಬಿ.ಎ ಮತ್ತು ಎಂ.ಎ ಪದವಿ ಪಡೆದರು. ಸ್ನಾತಕೋತ್ತರ ಪದವಿಯಲ್ಲಿ ಅವರು ಮಂಡಿಸಿದ ‘ದಿ ಎಥಿಕ್ಸ್ ಆಫ್ ವೇದಾಂತ’ ಪ್ರಬಂಧ ಅವರ ಬದುಕಿನ ದಿಕ್ಕನ್ನೇ ಬದಲಿಸಿತು. ಕೇವಲ 20ನೇ ವಯಸ್ಸಿನ ಯುವಕನಲ್ಲಿದ್ದ ಸಿದ್ಧಾಂತಗಳು ಮತ್ತು ವೇದಾಂತ ವಿಚಾರಗಳು ಅವರನ್ನು ಉತ್ತಮ ಗುರುವನ್ನಾಗಿ ರೂಪಿಸಿದವು.
ತಮ್ಮ 16ನೇ ವಯಸ್ಸಿನಲ್ಲಿ ಶಿವಕಾಮಮ್ಮ ಅವರನ್ನು ತಮ್ಮ ಬಾಳಸಂಗಾತಿಯಾಗಿ ಪಡೆದ ಅವರು, 1909ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ತಮ್ಮ ಅಚ್ಚುಮೆಚ್ಚಿನ ಶಿಕ್ಷಕ ಸೇವೆಯನ್ನು ಆರಂಭಿಸಿದರು. ಹಿಂದೂ ಧರ್ಮ, ಉಪನಿಷತ್ತುಗಳು, ಜೈನ ತತ್ವಜ್ಞಾನ ಹಾಗೂ ಪಾಶ್ಚಿಮಾತ್ಯ ತತ್ವಜ್ಞಾನಿಗಳನ್ನು ಆಳವಾಗಿ ಅಧ್ಯಯನ ಮಾಡಿದ್ದ ಅವರು, 1918ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ತತ್ವಜ್ಞಾನ ವಿಭಾಗದ ಉಪನ್ಯಾಸಕರಾದರು.
ದೇಶ–ವಿದೇಶಗಳ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಾ ಸಾಗಿದ ಅವರು, ‘ದಿ ಫಿಲಾಸಫಿ ಆಫ್ ರವೀಂದ್ರನಾಥ್ ಠಾಗೋರ್’, ‘ಜೆನೀನ್ ಮೆನಿಫೆಸ್ಟೇಷನ್ ಆಫ್ ಇಂಡಿಯನ್ ಸ್ಪಿರಿಟ್’ ಮತ್ತು ‘ದಿ ರೀಜ್ನ್ ಆಫ್ ರಿಲಿಜಿಯನ್ ಇನ್ ಕಾಂಟೆಂಪರಿ ಫಿಲಾಸಫಿ’ ಪುಸ್ತಕಗಳನ್ನು ಬರೆದರು. ಅವರ ಪಾಂಡಿತ್ಯವನ್ನು ಮೆಚ್ಚಿ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯವು ‘ಧರ್ಮ ಶಾಸ್ತ್ರ ಮತ್ತು ನೀತಿಶಾಸ್ತ್ರ’ ವಿಷಯದ ಮೇಲೆ ಉಪನ್ಯಾಸ ನೀಡಲು ಆಹ್ವಾನಿಸಿತು. ಭಾರತದ ಸ್ವಾತಂತ್ರ್ಯಕ್ಕಾಗಿಯೂ ಹೋರಾಡಿದ ಅವರು, ರಾಜೇಂದ್ರ ಪ್ರಸಾದ್ ಅವರ ನಂತರ 1962ರಲ್ಲಿ ಭಾರತದ ಎರಡನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದರು. ಮಹಾರಾಜ ಕಾಲೇಜಿನಲ್ಲಿ ಉಪರಾಷ್ಟ್ರಪತಿಯಾಗಿ ದೆಹಲಿಗೆ ತೆರಳುವಾಗ ವಿದ್ಯಾರ್ಥಿಗಳು ಅವರ ಸಾರೋಟಿಗೆ ತಾವೇ ಕುದುರೆಗಳಾಗಿ ರೈಲ್ವೆ ನಿಲ್ದಾಣದವರೆಗೆ ಎಳೆದುಕೊಂಡು ಹೋಗಿ ವಿದಾಯ ಹೇಳಿದ್ದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ನನ್ನ ಜೀವನದ ದಾರಿದೀಪ – ಆ.ದಾ. ಸತೀಶನ್ ಗುರೂಜಿ:

ರಾಧಕೃಷ್ಣನ್ ಅವರಂತಹ ಆದರ್ಶಪ್ರಾಯ ಶಿಕ್ಷಕರ ಸಾಲಿನಲ್ಲಿ ನನ್ನಂತಹ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾದವರು ಚಾಮರಾಜನಗರದ ವಿ.ಎಚ್.ಪಿ. ಕನ್ನಡ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕರಾಗಿದ್ದ ದಿವಂಗತ ಆ.ದಾ. ಸತೀಶನ್ ಗುರೂಜಿ. ಶಾಲೆಯಲ್ಲಿ ಪ್ರತಿದಿನ ಸಂಸ್ಕೃತಿ, ದೇಶ, ದೇಶದ ಇತಿಹಾಸ, ಇತಿಹಾಸ ಪುರುಷರು ಹಾಗೂ ಕನ್ನಡ ವಿಷಯಗಳ ಬಗ್ಗೆ ತಿಳಿವಳಿಕೆ ನೀಡುತ್ತಿದ್ದರು. ಶಾಲೆಯ ನಂತರ ಆರ್ಎಸ್ಎಸ್ ಕಾರ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿ ವಿದ್ಯಾಭ್ಯಾಸದ ಜತೆಗೆ ಉತ್ತಮ ಸಂಸ್ಕಾರವನ್ನು ಕಲಿಸುತ್ತಿದ್ದರು. ಪ್ರತಿಯೊಬ್ಬ ವಿದ್ಯಾರ್ಥಿಯ ಕಷ್ಟ–ಸುಖಗಳಲ್ಲಿ ಭಾಗಿಯಾಗುತ್ತಿದ್ದ ಅಪರೂಪದ ಗುರು ಅವರಾಗಿದ್ದರು.
ಗುರೂಜಿಯವರ ಶಿಸ್ತು ಮತ್ತು ಪ್ರೋತ್ಸಾಹವೇ ನನ್ನ ಶೈಕ್ಷಣಿಕ ಸಾಧನೆಗೆ ಮೂಲ ಕಾರಣ. ಹಳ್ಳಿಯ ಶಾಲೆಯೊಂದರಲ್ಲಿ 4ನೇ ತರಗತಿವರೆಗೆ ಓದಿ 5ನೇ ತರಗತಿಗೆ ವಿ.ಎಚ್.ಪಿ. ಸೇರಿದ ನಾನು, 7ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ 92% ಅಂಕ ಗಳಿಸಲು ಹಾಗೂ ಕನ್ನಡ ವಿಷಯದಲ್ಲಿ 100ಕ್ಕೆ 99 ಅಂಕ ಪಡೆಯಲು ಅವರೇ ಕಾರಣರಾಗಿದ್ದರು. ಒಮ್ಮೆ ಗಣರಾಜ್ಯೋತ್ಸವದ ರಜೆಯ ದಿನ ಅಜ್ಜಿಯ ಮನೆಗೆ ತೆರಳಿ ಶಾಲೆಗೆ ಗೈರಾಗಿದ್ದ ನನಗೆ, ಅವರು ನೀಡಿದ ಬುದ್ಧಿಮಾತು ನನ್ನ ಜೀವನದ ದಿಕ್ಕನ್ನೇ ಬದಲಿಸಿತು. ಅಂದಿನಿಂದ ಇಂದಿನವರೆಗೂ ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ಅಥವಾ ಯಾವುದೇ ಶಾಲೆಯಲ್ಲಿ ಕಾರ್ಯಕ್ರಮವಿರಲಿ, ತಪ್ಪದೆ ಭಾಗವಹಿಸುವುದು ಮತ್ತು ಧ್ವಜಪ್ರಣಾಮ ಸಲ್ಲಿಸುವುದು ನನ್ನ ನಿತ್ಯ ನಿಯಮವಾಗಿದೆ.
ಬೆಳಗ್ಗೆ 7:30ರ ಬಸ್ನಲ್ಲಿ ಬರುತ್ತಿದ್ದ ನನ್ನನ್ನು ಶಾಲೆಗೆ ಮುಂಚಿತವಾಗಿ ಗುರೂಜಿಯವರ ಕಾರ್ಯಾಲಯಕ್ಕೆ ಹೋಗುವಂತೆ ತಂದೆ ಹೇಳಿದ್ದರಿಂದ, 1998ರಿಂದ 2000ನೇ ಇಸವಿಯವರೆಗೆ ಅವರ ಸ್ಕೂಟರ್ನಲ್ಲಿ ಶಾಲೆಗೆ ಹೋಗುವುದು ನನಗೆ ಹೆಮ್ಮೆಯ ಸಂಗತಿಯಾಗಿತ್ತು. ಕೇವಲ ಶಾಲೆಯಷ್ಟೇ ಅಲ್ಲದೆ, ಪ್ರತಿಯೊಬ್ಬ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಅವರ ನಡವಳಿಕೆಗಳನ್ನು ಗಮನಿಸಿ ತಿದ್ದುವ ಅಪೂರ್ವ ಕಾಳಜಿ ಅವರಲ್ಲಿತ್ತು. ಅಂತಹ ಮಹಾನ್ ಚೇತನ ಇಂದು ನಮ್ಮೊಂದಿಗಿಲ್ಲದಿರುವುದು ನಂಬಲಾಗದ ಸತ್ಯ.

ಸತೀಶನ್ ಗುರೂಜಿಯಂತಹ ನಿಸ್ವಾರ್ಥ ಶಿಕ್ಷಕರು ನಮ್ಮೊಡನೆ ಸದಾ ಇರಲಿ. ಸಮಾಜದಲ್ಲಿ ಅಂತಹ ಗುರುಗಳು ನಮಗೆ ಸಿಗಲಿ. ನಮ್ಮ ಸುತ್ತಮುತ್ತ ನಿರಂತರವಾಗಿ ಶಿಕ್ಷಕ ಸೇವೆ ಸಲ್ಲಿಸುತ್ತಿರುವ ಎಲ್ಲಾ ಗುರುಗಳಿಗೂ ಈ ಶಿಕ್ಷಕರ ದಿನಾಚರಣೆಯ ಮಹತ್ತರ ಹಬ್ಬದ ಶುಭಾಶಯಗಳು.
