ಬ್ಯಾಡ್ಮಿಂಟನ್ ಬೆನ್ನೇರಿ
2024ನೇ ಇಸವಿಯಲ್ಲಿ ನನ್ನ ವಿಶ್ವ ದಾಖಲೆ ನಿರ್ಮಾಣದ ಪಯಣ ಮುಗಿದ ನಂತರ, ಮತ್ತೇನಾದರೂ ಸಾಧಿಸಬೇಕು ಎಂಬ ಆಸೆ ನನ್ನಲ್ಲಿ ಹುಟ್ಟಿಕೊಂಡಿತು. ಮುಂದಿನ ಸಾಧನೆಯ ದಾರಿಯನ್ನು ಹುಡುಕುವಾಗ ನನ್ನ ಮುಂದೆ ಹಲವಾರು ಕ್ಷೇತ್ರಗಳು ಬಂದವು. ಅವುಗಳಲ್ಲಿ ನನ್ನ ಮೊದಲ ಆಯ್ಕೆ ಕ್ರೀಡೆಯಾಗಿತ್ತು. ಆದರೆ ಯಾವ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲ ನನ್ನಲ್ಲಿತ್ತು. ಕ್ರೀಡೆಗಳ ಬಗ್ಗೆ ತಿಳಿದುಕೊಳ್ಳಲು ಮೈಸೂರಿನ ಪುಟ್ಟರಾಜ ಗವಾಯಿ ಕ್ರೀಡಾಂಗಣಕ್ಕೆ ಪೋಷಕರೊಂದಿಗೆ ಭೇಟಿ ನೀಡಿದೆ. ಅಲ್ಲಿದ್ದ ಈಜು ತರಬೇತಿ ಕೇಂದ್ರದಲ್ಲಿ ಈಜು ತರಬೇತಿಗೆ ಸೇರಿದೆ. ಕೆಲವು ತಿಂಗಳುಗಳ ಕಾಲ ಅಭ್ಯಾಸ ಮಾಡಿ ಪ್ರಾಥಮಿಕ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಮುಂದಿನ ಹಂತಕ್ಕೆ ಹೋದೆ.

ಮುಂದೆ ಹೋಗುತ್ತಿದ್ದಂತೆ ನೀರಿನ ಆಳ ಹೆಚ್ಚಾಗತೊಡಗಿತು. ನೀರಿನ ಆಳ ಹೆಚ್ಚಾದಂತೆ ನನ್ನೊಳಗಿನ ಭಯವೂ, ಹೃದಯದ ಬಡಿತವೂ ಹೆಚ್ಚಾಗತೊಡಗಿತು. ಮೀನಿನಂತೆ ಈಜಲು ಹೋದ ನಾನು, ಕೊನೆಗೆ ಆಮೆಯಂತೆ ಮೆಲ್ಲನೆ ಈಜುಕೊಳದಿಂದ ಹೊರಬಂದೆ. ಆದರೆ ಕ್ರೀಡೆಯ ಮೇಲಿನ ನನ್ನ ಆಸಕ್ತಿ ಮಾತ್ರ ಕಡಿಮೆಯಾಗಲಿಲ್ಲ.

ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕ್ರಿಕೆಟ್, ಫುಟ್ಬಾಲ್, ಬ್ಯಾಸ್ಕೆಟ್ಬಾಲ್, ಕರಾಟೆ ಸೇರಿದಂತೆ ಹಲವಾರು ಕ್ರೀಡೆಗಳ ತರಬೇತಿಯನ್ನು ಗಮನಿಸಿದೆ. ಅಲ್ಲಿಯೇ ಒಂದೆರಡು ದಿನ ಷಟಲ್ ಬ್ಯಾಡ್ಮಿಂಟನ್ ಆಡಿದೆ. ಎಲ್ಲ ಕ್ರೀಡೆಗಳ ನಡುವೆ ಬ್ಯಾಡ್ಮಿಂಟನ್ ಆಟವೇ ನನಗೆ ಹೆಚ್ಚು ಇಷ್ಟವಾಯಿತು. ತಕ್ಷಣವೇ ಮನೆಗೆ ಬಂದು, “ನಾನು ಬ್ಯಾಡ್ಮಿಂಟನ್ ತರಬೇತಿಗೆ ಸೇರುತ್ತೇನೆ” ಎಂದು ತಿಳಿಸಿದೆ.
ಮನೆಯ ಹತ್ತಿರದ ಫೆದರ್ಸ್ ಕ್ರೀಡಾ ಅಕಾಡೆಮಿಯಲ್ಲಿ 2025ರ ಜನವರಿ ತಿಂಗಳಲ್ಲಿ ಬ್ಯಾಡ್ಮಿಂಟನ್ ತರಬೇತಿಗೆ ಸೇರಿದೆ. ಸುಮಾರು ಒಂದೂವರೆ ವರ್ಷದ ನಂತರ, ಅಂದರೆ 11-04-2026 ರಂದು ಗೋಲ್ಡನ್ ಜೂನಿಯರ್ ಬ್ಯಾಡ್ಮಿಂಟನ್ ಪಂದ್ಯಾವಳಿ–2026 ಎಂಬ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸುವ ಅವಕಾಶ ದೊರೆಯಿತು.
ಈ ಪಂದ್ಯಾವಳಿಯಲ್ಲಿ ವಿವಿಧ ಬ್ಯಾಡ್ಮಿಂಟನ್ ತರಬೇತಿ ಕೇಂದ್ರಗಳ ಚಾಂಪಿಯನ್ ಆಟಗಾರರು ಭಾಗವಹಿಸಿದ್ದರು. ಸುಮಾರು 300ಕ್ಕೂ ಹೆಚ್ಚು ಸ್ಪರ್ಧಿಗಳು ಕಣಕ್ಕಿಳಿದಿದ್ದರು. ಕೇವಲ ಮೈಸೂರು ಮತ್ತು ಬೆಂಗಳೂರು ಮಾತ್ರವಲ್ಲದೆ, ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದಲೂ ಆಟಗಾರರು ಆಗಮಿಸಿದ್ದರು.

ಅಂತಹ ಪಂದ್ಯಾವಳಿಯಲ್ಲಿ ನನ್ನ ಆಟದ ಟಿ–ಶರ್ಟ್ನ ಹಿಂದೆ “Dr. Pruthu 21” ಎಂದು ಮುದ್ರಿಸಿಕೊಂಡು ಮೈದಾನಕ್ಕಿಳಿದ ಕ್ಷಣ ನನ್ನ ಜೀವನದ ಹೆಮ್ಮೆಯ ಕ್ಷಣಗಳಲ್ಲಿ ಒಂದಾಯಿತು.
ಆದರೆ ಈ ಪಂದ್ಯಾವಳಿಯವರೆಗೆ ತಲುಪಿದ ಪಯಣ ಮಾತ್ರ ನಾನು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಅದು ಒಂದು ಅದ್ಭುತ ಅನುಭವದ ಪಯಣ.
ಈ ಬ್ಯಾಡ್ಮಿಂಟನ್ ಕನಸನ್ನು ನನಸು ಮಾಡಲು ಪ್ರತಿದಿನ ಬೆಳಗ್ಗೆ 5 ಗಂಟೆಗೆ ಎದ್ದು ಸಿದ್ಧವಾಗಬೇಕಾಗುತ್ತಿತ್ತು. ಸೈಕಲ್ನಲ್ಲಿ ಸುಮಾರು ಆರು ಕಿಲೋಮೀಟರ್ ಪ್ರಯಾಣ ಮಾಡಿ ಬೆಳಗ್ಗೆ 5.30ಕ್ಕೆ ತರಬೇತಿ ಕೇಂದ್ರವನ್ನು ತಲುಪುತ್ತಿದ್ದೆ. ಪ್ರತಿದಿನ ಸೈಕಲ್ನಲ್ಲಿ ಹೋಗಿ ಬರುವುದು ಕೂಡ ನನ್ನ ಜೀವನದ ಮತ್ತೊಂದು ಸುಂದರ ಅನುಭವ. ಅದರ ಬಗ್ಗೆ ಮುಂದೊಂದು ದಿನ ಪ್ರತ್ಯೇಕವಾಗಿ ಬರೆಯುತ್ತೇನೆ.
ಮೊದಲಿಗೆ ನನ್ನ ಕಲ್ಪನೆಯಲ್ಲಿ ಬ್ಯಾಡ್ಮಿಂಟನ್ ಎಂದರೆ, ಎದುರಿನಿಂದ ಬರುವ ಷಟಲ್ ಅನ್ನು ಈ ಕಡೆಯಿಂದ ಆ ಕಡೆಗೆ ಹೊಡೆಯುವುದಷ್ಟೇ ಎಂದುಕೊಂಡಿದ್ದೆ. ಆದರೆ ನನ್ನ ತರಬೇತುದಾರರಾದ ಸುಹೇಲ್ ಸರ್ ಮತ್ತು ಶಿವು ಸರ್, “ಬ್ಯಾಡ್ಮಿಂಟನ್ ಎಂದರೆ ಕೇವಲ ಷಟಲ್ ಹೊಡೆಯುವುದು ಮಾತ್ರವಲ್ಲ; ಆಡುವುದಕ್ಕೂ ಮೊದಲು ಕಲಿಯಬೇಕಾದದ್ದು ತುಂಬಾ ಇದೆ” ಎಂದು ತಿಳಿಸಿದರು. ಅಂಕಣದ ಅಳತೆ, ವಿವಿಧ ವಿಭಾಗಗಳು, ಮಧ್ಯದಲ್ಲಿರುವ ಬಲೆ, ಆಟದ ನಿಯಮಗಳು ಸೇರಿದಂತೆ ಅನೇಕ ವಿಷಯಗಳನ್ನು ಅವರು ತುಂಬಾ ತಾಳ್ಮೆಯಿಂದ ಕಲಿಸಿದರು.
ಆಟದ ಮೊದಲ ಹಂತದಲ್ಲಿ ಷಟಲ್ ಎತ್ತುವ ಅಭ್ಯಾಸ, ಸಂಗ್ರಹಿಸಿ ಹೊಡೆಯುವ ಅಭ್ಯಾಸ, ನೆರಳು ಅಭ್ಯಾಸ ಸೇರಿದಂತೆ ಹಲವು ರೀತಿಯ ತರಬೇತಿಗಳನ್ನು ಪಡೆದೆ. ಆದರೆ ನನ್ನ ಕನಸಿನ ಬ್ಯಾಡ್ಮಿಂಟನ್ ಆಡುವುದು ಅಷ್ಟು ಸುಲಭವಾಗಿರಲಿಲ್ಲ. ಅಂಕಣಕ್ಕೆ ಕಾಲಿಡುವ ಮೊದಲು ನಮ್ಮ ಒಳಾಂಗಣ ಮೈದಾನವನ್ನು ಹತ್ತು ಬಾರಿ ಓಡಿ ಸುತ್ತಬೇಕು. ಅದೇ ನಮ್ಮ ದೇಹವನ್ನು ಆಟಕ್ಕೆ ಸಜ್ಜುಗೊಳಿಸುವ ಅಭ್ಯಾಸ. ಆ ಹತ್ತು ಸುತ್ತುಗಳನ್ನು ಪೂರ್ಣಗೊಳಿಸಿದ ನಂತರವೇ ಅಂಕಣದೊಳಗೆ ಕಾಲಿಡಲು ಹಾಗೂ ಬ್ಯಾಡ್ಮಿಂಟನ್ ರಾಕೆಟ್ ಮುಟ್ಟಲು ಅವಕಾಶ ಸಿಗುತ್ತಿತ್ತು.
ಬ್ಯಾಡ್ಮಿಂಟನ್ ಆಡುವುದು ಎಷ್ಟು ಖುಷಿಯೋ, ಅದರ ಎರಡರಷ್ಟು ಕಷ್ಟ ಅದರ ಭಾಗವಾಗಿರುವ ದೈಹಿಕ ಸಾಮರ್ಥ್ಯ ಹೆಚ್ಚಿಸುವ ವ್ಯಾಯಾಮಗಳು ಮತ್ತು ಸ್ನಾಯು ಹಿಗ್ಗಿಸುವ ವ್ಯಾಯಾಮಗಳು. ಅವುಗಳನ್ನು ನೆನೆಸಿಕೊಂಡರೆ ಈಗಲೂ ನನ್ನ ಕೈಕಾಲುಗಳಲ್ಲಿ ನೋವು ಉಂಟಾಗುತ್ತದೆ.
ನನ್ನ ತರಬೇತಿ ಕೇಂದ್ರದಲ್ಲಿ ಹಂತ ಹಂತವಾಗಿ ತಂಡದ ಆಟ, ಏಕಾಂಗಿ ಪಂದ್ಯಗಳು, ಆಂತರಿಕ ಪಂದ್ಯಗಳು ಹಾಗೂ ವಿವಿಧ ರೀತಿಯ ಅಭ್ಯಾಸ ಪಂದ್ಯಗಳನ್ನು ಆಡಿ ಆಟವನ್ನು ಕಲಿಯುತ್ತಾ, ಕೊನೆಗೆ ಪಂದ್ಯಾವಳಿಯಲ್ಲಿ ಭಾಗವಹಿಸುವ ಹಂತಕ್ಕೆ ತಲುಪಿದೆ.
ಪಂದ್ಯಾವಳಿಯಲ್ಲಿ ಭಾಗವಹಿಸಬೇಕು ಎಂಬ ನನ್ನ ಆಸೆಯನ್ನು ಅರಿತಿದ್ದ ನನ್ನ ತರಬೇತುದಾರರು, ಒಂದೂವರೆ ವರ್ಷದ ನಿರಂತರ ತರಬೇತಿಯ ನಂತರ, ಬೆಂಗಳೂರಿನ ಸ್ಪಾರ್ಕ್–7 ಕ್ರೀಡಾಂಗಣದಲ್ಲಿ ವಿವಾ ವೆಂಚರ್ಸ್ ವತಿಯಿಂದ ಆಯೋಜಿಸಿದ್ದ ನಾಕ್ಔಟ್ ಮತ್ತು ಗೋಲ್ಡನ್ ಜೂನಿಯರ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿ–2026 ಗೆ ನನ್ನನ್ನು ಆಯ್ಕೆ ಮಾಡಿ ಕಳುಹಿಸಿದರು.
ಪಂದ್ಯಾವಳಿಯಲ್ಲಿ ಭಾಗವಹಿಸಬೇಕು ಎಂಬ ನನ್ನ ಬಹುದಿನಗಳ ಕನಸು ಕೊನೆಗೂ ನನಸಾಯಿತು. ಈ ಪಂದ್ಯಾವಳಿಯಲ್ಲಿ ಸತತ ನಾಲ್ಕು ಸುತ್ತಿನ ಪಂದ್ಯಗಳಲ್ಲಿ ಗೆದ್ದು ಮುನ್ನಡೆದೆ. ತಮಿಳುನಾಡಿನ ಬ್ಯಾಡ್ಮಿಂಟನ್ ಆಟಗಾರ ವರುಣ್ ವೀರನ್ ಅವರೊಂದಿಗೆ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹತ್ತು ಅಂಕಗಳ ಅಂತರದಿಂದ ಗೆದ್ದು ಮುಂದಿನ ಹಂತಕ್ಕೆ ತಲುಪಿದೆ. ನಂತರ ಆಂಧ್ರಪ್ರದೇಶದ ಕಾರ್ತೀಕೇಯನ್ ಎಂಬ ಆಟಗಾರನೊಂದಿಗೆ ಸೆಮಿಫೈನಲ್ ಪಂದ್ಯ ಆಡಿದೆ. ಈ ಪಂದ್ಯ ಬಹಳ ಕುತೂಹಲಕಾರಿಯಾಗಿಯೂ, ರೋಮಾಂಚನಕಾರಿಯಾಗಿಯೂ ಇತ್ತು. ಈ ಪಂದ್ಯವನ್ನು ಗೆದ್ದು ಅಂತಿಮ ಸುತ್ತು ತಲುಪುತ್ತೇನೆ ಎಂಬ ಆತ್ಮವಿಶ್ವಾಸ ನನ್ನಲ್ಲಿತ್ತು.
ಆದರೆ ನಮ್ಮಷ್ಟೇ ಸರಿ ಸಮನಾಗಿ ಪಕ್ಕದ ಅಂಕಣದಲ್ಲಿಯೂ ಮತ್ತೊಂದು ಸೆಮಿಫೈನಲ್ ಪಂದ್ಯ ನಡೆಯುತ್ತಿತ್ತು. ಅಲ್ಲಿ ಆಟವಾಡುತ್ತಿದ್ದ ಒಬ್ಬ ಆಟಗಾರ ಆಟದ ಮಧ್ಯೆ ಜೋರಾಗಿ ಕಿರುಚಿ ತನ್ನ ಕಾಲುಗಳನ್ನು ಹಿಡಿದುಕೊಂಡು ಮೈದಾನದಲ್ಲಿಯೇ ಬಿದ್ದ. ನಮ್ಮ ಪಂದ್ಯ ಮಾತ್ರ ನಿಲ್ಲಲಿಲ್ಲ. ಅಲ್ಲಿಯೇ ಇದ್ದ ವೈದ್ಯರು ಅವನ ಕಾಲುಗಳಿಗೆ ಸ್ನಾಯು ಸೆಳೆತ ಉಂಟಾಗಿದೆ ಎಂದು ಪರೀಕ್ಷಿಸಿ, ಅವನನ್ನು ಮೈದಾನದಿಂದ ಹೊರಗೆ ಕರೆದುಕೊಂಡು ಹೋದರು.
ಆ ದೃಶ್ಯವನ್ನು ನಾನು ನೋಡುತ್ತಿದ್ದಂತೆಯೇ ನನ್ನ ಮನಸ್ಸಿನಲ್ಲಿ ಆತಂಕ ಮೂಡಿತು. ನನ್ನ ಆತ್ಮವಿಶ್ವಾಸವೂ ಅದೇ ಕ್ಷಣದಲ್ಲಿ ಕುಸಿಯಿತು. ಸಾಮಾನ್ಯವಾಗಿ ಅಭ್ಯಾಸದ ವೇಳೆ ಆಟವಾಡುವಾಗ ನಾವು ಆಗಾಗ ಬೀಳುತ್ತಿದ್ದೆವು, ಮತ್ತೆ ಎದ್ದು ಆಡುತ್ತಿದ್ದೆವು. ಆದರೆ ಒಬ್ಬ ಆಟಗಾರ ನಡೆಯಲೂ ಆಗದಷ್ಟು ನೋವಿನಿಂದ ನರಳುತ್ತಿದ್ದುದನ್ನು ನೋಡಿ ನಾನು ಗಾಬರಿಯಾದೆ. ನನ್ನ ಆಟದ ಕೊನೆಯ ಐದು ಅಂಕಗಳು ಈ ಆತಂಕದಲ್ಲಿಯೇ ಗುರಿ ತಪ್ಪಿದವು. ಕೇವಲ ಐದು ಅಂಕಗಳ ಅಂತರದಲ್ಲಿ ಪಂದ್ಯಾವಳಿಯಿಂದ ಹೊರಬಂದು, ಒಂದು ಟಿ–ಶರ್ಟ್ ಅನ್ನು ಬಹುಮಾನವಾಗಿ ಪಡೆದು ಮನೆಗೆ ಹಿಂದಿರುಗಿದೆ. ಆದರೆ ಈ ಸೋಲು ನನಗೆ ಹಲವಾರು ವಿಷಯಗಳನ್ನು ಕಲಿಸಿತು.

ಒಂದು ದೊಡ್ಡ ಪಂದ್ಯಾವಳಿ ಹೇಗಿರುತ್ತದೆ, ಅಲ್ಲಿನ ನಿಯಮಾವಳಿಗಳು ಯಾವುವು, ಪಂದ್ಯಗಳ ತೀರ್ಪು ಹೇಗೆ ನೀಡುತ್ತಾರೆ, ಆಟಗಾರನ ಮನಸ್ಥಿತಿ ಹೇಗಿರುತ್ತದೆ, ಪಂದ್ಯಾವಳಿಯಲ್ಲಿ ಆಡುವ ಅನುಭವ ಹೇಗಿರುತ್ತದೆ ಎಂಬುದನ್ನು ತಿಳಿದುಕೊಂಡೆ. ನಮಗೆ ಪರಿಚಯವಿರುವವರ ಜೊತೆ ಪ್ರತಿನಿತ್ಯ ಆಟವಾಡುವುದಕ್ಕೂ, ಮೊದಲ ಬಾರಿಗೆ ಭೇಟಿಯಾಗುವ ಆಟಗಾರರೊಂದಿಗೆ ಆಡಬೇಕಾಗುವುದಕ್ಕೂ ಇರುವ ವ್ಯತ್ಯಾಸವೇನು ಎಂಬುದನ್ನೂ ಅರಿತುಕೊಂಡೆ. ನಮ್ಮ ಅಕ್ಕಪಕ್ಕ ಏನೇ ನಡೆದರೂ ವಿಚಲಿತರಾಗದೆ ಹೇಗೆ ಏಕಾಗ್ರತೆಯಿಂದ ಆಟವಾಡಬೇಕು, ಪ್ರೇಕ್ಷಕರ ಚಪ್ಪಾಳೆ, ಪ್ರೋತ್ಸಾಹ ಹಾಗೂ ಶಿಳ್ಳೆಗಳ ನಡುವೆಯೂ ಹೇಗೆ ಗಮನ ಕೇಂದ್ರೀಕರಿಸಬೇಕು ಎಂಬುದನ್ನು ಈ ಪಂದ್ಯಾವಳಿ ನನಗೆ ಕಲಿಸಿತು. ಈ ಪಂದ್ಯಾವಳಿ ನನಗೆ ಕೇವಲ ಸೋಲನ್ನು ಮಾತ್ರ ನೀಡಲಿಲ್ಲ. ನನ್ನ ಬ್ಯಾಡ್ಮಿಂಟನ್ ಪಯಣಕ್ಕೆ ಹೊಸ ದಾರಿಯನ್ನು ತೆರೆದಿತು.
ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ (BAI) ಸದಸ್ಯತ್ವ ಪಡೆಯಲು ಇದು ಅನುವು ಮಾಡಿಕೊಟ್ಟಿತು. ಮತ್ತಷ್ಟು ತರಬೇತಿ ಹಾಗೂ ಆತ್ಮವಿಶ್ವಾಸದೊಂದಿಗೆ BAI ಅಧಿಕಾರಿಗಳು ಸೂಚಿಸಿರುವ ಕರ್ನಾಟಕದ ಮುಂದಿನ ಪಂದ್ಯಾವಳಿಗಳಿಗೆ ಸಿದ್ಧವಾಗುತ್ತಿದ್ದೇನೆ.
“ಪ್ರತಿ ಸೋಲು ನಮ್ಮ ಮುಂದಿನ ಗೆಲುವಿಗೆ ಒಂದು ತರಬೇತಿ” ಎಂದು ಶಾಲೆಯಲ್ಲಿ ಶಿಕ್ಷಕರು ಹೇಳಿದ ಮಾತುಗಳು ಅಕ್ಷರಶಃ ಸತ್ಯ ಎಂಬುದು ಈಗ ನನಗೆ ಅರಿವಾಗಿದೆ.
ಹತ್ತು ವರ್ಷ ತುಂಬುವ ಮೊದಲು ಒಂದು ಪಂದ್ಯಾವಳಿಯಲ್ಲಿ ಗೆಲ್ಲಬೇಕು ಎಂಬ ಆಸೆಯನ್ನು ಮತ್ತಷ್ಟು ಪೋಷಿಸುತ್ತಿದ್ದೇನೆ. ಅದಕ್ಕಾಗಿ ಪ್ರತಿದಿನವೂ ಶ್ರಮಿಸುತ್ತಿದ್ದೇನೆ, ಅಭ್ಯಾಸ ಮಾಡುತ್ತಿದ್ದೇನೆ, ಪ್ರಯತ್ನಿಸುತ್ತಿದ್ದೇನೆ.
ಗೆಲುವು ಪದಕವನ್ನು ನೀಡಬಹುದು; ಆದರೆ ಸೋಲು ಅನುಭವವನ್ನು ನೀಡುತ್ತದೆ. ಆ ಅನುಭವವೇ ಮುಂದಿನ ಗೆಲುವಿನ ಅಡಿಪಾಯವಾಗುತ್ತದೆ. ನನ್ನ ಬ್ಯಾಡ್ಮಿಂಟನ್ ಪಯಣ ಈಗಷ್ಟೇ ಆರಂಭವಾಗಿದೆ. ಒಂದು ದಿನ ಭಾರತದ ಪರವಾಗಿ ಆಡಬೇಕು ಎಂಬ ಕನಸಿನೊಂದಿಗೆ ನಾನು ಪ್ರತಿದಿನವೂ ಅಭ್ಯಾಸ ಮುಂದುವರಿಸುತ್ತಿದ್ದೇನೆ.
