ನೀರು ಅಮೂಲ್ಯ ಸಂಪತ್ತು— ಅದನ್ನು ಮಿತವಾಗಿ ಬಳಸಿ.
ನಮ್ಮ ಮನೆ ಸಂಘದ ಮನೆ , ಚಟುವಟಿಕೆಯ ಮನೆ, ನಮ್ಮ ಮನೆಗೆ ಬರುವವರು , ಭೇಟಿ ನೀಡುವವರು ಪ್ರತಿ ನಿತ್ಯ ಇರುತ್ತಾರೆ. ಮನೆಗೆ ಬಂದವರನ್ನು ಮಾತನಾಡಿಸುವುದು ನನ್ನ ಕರ್ತವ್ಯ. ಹೀಗೆ ಮನೆಗೆ ಬರುವ ಕೆಲವು ಹಿರಿಯರು ಅವರ ನಡವಳಿಕೆಯಲ್ಲಿಯೇ ನಮಗೆ ಪಾಠ ಕಲಿಸುತ್ತಾರೆ. ಹೀಗೆ ಇಬ್ಬರು ತಾತಂದಿರು ಬೇರೆ ಬೇರೆ ರೀತಿಯಲ್ಲಿ ನನಗೆ ನೀರಿನ ಮಹತ್ವ ತಿಳಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೇಷ್ಠ ಪ್ರಚಾರಕರಾದ ಸು. ರಾಮಣ್ಣ ತಾತ ಮೈಸೂರಿಗೆ ಬಂದಾಗ ನಮ್ಮ ಮನೆಗೆ ಬಂದು ನಮ್ಮನ್ನೆಲ್ಲ ಪ್ರೀತಿಯಿಂದ ಮಾತನಾಡಿಸಿ ಒಂದಷ್ಟು ವಿಚಾರ ಹೇಳುತ್ತಾರೆ, ಅವರು ಬರುವ ಹೊತ್ತಿಗೆ ಮನೆಯಲ್ಲಿ ಬೆಳಗಿನ ಉಪಹಾರ ಸಿದ್ಧವಿರುತ್ತದೆ. ಒಂದು ದಿನ ಮಾಧವ ಕೃಪ ದಿಂದ ಬಂದ ರಾಮಣ್ಣ ತಾತ ಮನೆಯಲ್ಲಿ ತಿಂಡಿ ತಿಂದರು , ಅವರನ್ನು ಸತ್ಕರಿಸುವುದು ನಮಗೆ ಬಹಳ ಸಂತೋಷದ ವಿಷಯ ಹಾಗೆಯೇ ಅವರು ತಿಂಡಿ ತಿಂದ ನಂತರ ಕೈ ತೊಳೆದು ಕೊಳ್ಳಲು ಸಹಾಯಮಾಡಲು ಸಿಂಕ್ ನಲ್ಲಿ ನಲ್ಲಿಯ ನೀರು ತಿರುಗಿಸಿ ಬಿಟ್ಟಿದ್ದೆ, ತಾತ ಕೈತೊಳೆದು ಕೊಳ್ಳಲು ಬಂದರು ಅವರಿಗೆ ಸಹಾಯ ಮಾಡಿದ್ದಕ್ಕೆ ಖುಷಿಯಿಂದ ನನ್ನನ್ನು ಅಭಿನಂದಿಸುತ್ತಾರೆ ಅಥವಾ ಖುಷಿ ವ್ಯಕ್ತಪಡಿಸುತ್ತಾರೆ ಎಂದು ನಾನು ತಿಳಿದಿದ್ದೆ ಆದರೆ ಸಿಂಕ್ ಬಳಿ ಬಂದ ರಾಮಣ್ಣ ತಾತ ಅಯ್ಯೋ ಇಷ್ಟೊಂದು ನೀರು ವ್ಯರ್ಥ ಮಾಡಿದೆಯಲ್ಲ, ನಾನೆ ನೀರು ಬಿಟ್ಟು ಕೊಳ್ಳುವೆ ಎಂದು ಹೇಳಿದರು. ಏನಪ್ಪಾ ಎರಡು ನಿಮಿಷ ಮೊದಲು ನೀರು ಬಿಟ್ಟಿದ್ದಕ್ಕೆ ತಾತ ಹೀಗೆ ಅಂದರಲ್ಲ ಅನ್ನಿಸಿತು.

ಇದಾದ ಸ್ವಲ್ಪ ತಿಂಗಳ ನಂತರ ನನ್ನ ಮುತ್ತಾತನ ಸೋದರ ಸಂಬಂಧಿ ಕಲಿಯೂರು ರಂಗಣ್ಣ ತಾತ ನಮ್ಮ ಮನೆಗೆ ಬಂದರು ಬೆಳಿಗ್ಗೆಯಿಂದ ಒಂದೇ ಸಮ ಮಾತನಾಡಿದೆವು, ಮದ್ಯಾಹ್ನ ತಾತ ಕುಡಿಯಲು ನೀರು ಕೇಳಿದರು. ನಾನು ಅಡುಗೆ ಮನೆಗೆ ಹೋಗಿ ಒಂದು ಲೋಟ ಭರ್ತಿ ನೀರು ತಂದುಕೊಟ್ಟೆ ತೊಂಬತ್ತು ವರ್ಷ ದಾಟಿದ್ದ ತಾತ ನೀರು ನೋಡಿ ಇಷ್ಟು ಬೇಡ ಮಗು ಸ್ವಲ್ಪ ಕೊಡು ಸುಮ್ಮನೆ ನೀರು ವೇಸ್ಟ್ ಆಗುತ್ತೆ ಅಂದರು ನಾನು ಹೋಗಿ ಲೋಟದ ಅರ್ಧ ನೀರನ್ನು ಸಿಂಕ್ ಗೆ ಹಾಕಿ ಉಳಿದ ಅರ್ಧ ತಂದುಕೊಟ್ಟೆ.

80 ವರ್ಷದ ರಾಮಣ್ಣ ತಾತ, 90 ವರ್ಷದ ರಂಗಣ್ಣ ತಾತ ಇಬ್ಬರು ನೀರಿನ ಬಗ್ಗೆ ತಮ್ಮ ನಡವಳಿಕೆಯಲ್ಲಿ ತಿಳಿಸಿದ್ದರು ಆದರೆ ನನಗೆ ಅಂದು ಅರ್ಥ ಆಗಿರಲಿಲ್ಲ. ಇತ್ತೀಚೆಗೆ ಬೆಂಗಳೂರಿಗೆ ಅಜ್ಜಿ ಮನೆಗೆ ಹೋಗಿದ್ದೆ ಕಾವೇರಿ ನೀರು ಈಗ ವಾರಕ್ಕೆ ಎರಡೇ ದಿನ ಬರೋದು ನೀರನ್ನು ಕಡಿಮೆ ಬಳಸಬೇಕು ಎಂದು ಹೇಳಿದರು. ತಕ್ಷಣ ನನಗೆ ಈ ಎರಡು ತಾತ ನೆನಪಿಗೆ ಬಂದರು, ನೀರನ್ನು ಮಿತವಾಗಿ ಬಳಸಿ, ನೀರನ್ನು ಪೋಲು ಮಾಡಬೇಡಿ ಎಂದು ನಮಗೆ ಪಾಠ ಮಾಡುತ್ತಾರೆ ಆದರೆ ನಾವು ಅದನ್ನು ಕಲಿಯುವುದೇ ಇಲ್ಲ. ಆದರೆ ಬೇರೆ ಬೇರೆ ವಯಸ್ಸಿನ ಈ ಇಬ್ಬರು ತಾತ ನೀರನ್ನು ಮಿತವಾಗಿ ಬಳಸುವುದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಂದಿರುವುದನ್ನು ನಾನು ನನ್ನ ಮನೆಯಲ್ಲಿಯೇ ನೋಡಿದೆ. ಹಿರಿಯರ ಪ್ರತಿ ಮಾತು, ಬದುಕುವ ರೀತಿ ನಮಗೆ ಯಾವಾಗಲೂ ಪಾಠವೇ ಎಂಬುದು ಸುಳ್ಳಲ್ಲ ಎಂದು ನನಗೆ ಅನ್ನಿಸಿತು. ಸು ರಾಮಣ್ಣ ತಾತ ಮತ್ತು ರಂಗಣ್ಣ ತಾತಂದಿರಿಂದ ನಾನು ನೀರು ಮಿತವಾಗಿ ಬಳಸಬೇಕು ಎಂದು ಕಲಿತೆ. ಬದುಕಿನ ನಡವಳಿಕೆಯಿಂದಲೇ ನೀರಿನ ಮೌಲ್ಯ ಕಲಿಸಿದ್ದರು.ನಾವು ಪಾಠ ಪುಸ್ತಕದಲ್ಲಿ ಓದಿದ ವಿಷಯವನ್ನು ಅವರು ತಮ್ಮ ಜೀವನದಲ್ಲಿ ತೋರಿಸಿದ್ದರು.

“ನೀರು ಅಮೂಲ್ಯ ಸಂಪತ್ತು— ಅದನ್ನು ಮಿತವಾಗಿ ಬಳಸಿ.”
