ಬಾಗುವುದು ಸೋಲಲ್ಲ… ಬದುಕುವ ಜಾಣ್ಮೆ
ಒಮ್ಮೆ ಸಮುದ್ರಕ್ಕೆ ಒಂದು ಸಂಶಯ ಬರುತ್ತದೆ. ಅದನ್ನು ಬಗೆಹರಿಸಬೇಕು ಎಂದು ತನ್ನಲ್ಲಿ ಬಂದು ಸೇರುವ ಎಲ್ಲಾ ನದಿಗಳನ್ನು ಕೇಳುತ್ತದೆ.

“ನೀವುಗಳು ತುಂಬಿ ಹರಿದು ಬರುವಾಗ ದೊಡ್ಡ ದೊಡ್ಡ ಮರಗಳನ್ನು, ಬಂಡೆ ಸಹಿತ ತರುತ್ತೀರಿ. ನೆಲದಾಳಕ್ಕೆ ಬೇರು ಬಿಟ್ಟಿರುವ ಮರಗಳನ್ನೂ ತರುತ್ತೀರಿ. ಆದರೆ ದಿನವೂ ಬೆತ್ತವನ್ನು ತಂದದ್ದನ್ನು ನಾನು ನೋಡಿಲ್ಲ. ಅದಕ್ಕೆ ಅಷ್ಟು ಗಟ್ಟಿತನವೂ ಇಲ್ಲ. ಹಾಗಂತ ಅವು ನಿಮ್ಮಿಂದ ದೂರದಲ್ಲಿಯೂ ಇಲ್ಲ. ನಿಮ್ಮ ತೀರದಲ್ಲಿಯೇ ಬೆಳೆದಿರುತ್ತವೆ. ಹೀಗಿರುವಾಗ ಅವುಗಳನ್ನು ಯಾಕೆ ಕಿತ್ತು ತರುವುದಿಲ್ಲ ನೀವು? ಅವುಗಳ ಬಗ್ಗೆ ನಿಮಗೆ ಅಸಡ್ಡೆಯೇ? ಅಥವಾ ಅವುಗಳಿಂದ ನಿಮಗೆ ಏನಾದರೂ ಉಪಕಾರ ಆಗಿದೆಯೇ? ಈ ವಿಷಯ ನನ್ನಲ್ಲಿ ತುಂಬಾ ದಿನಗಳಿಂದ ಉಳಿದಿದೆ. ಹೇಳಿ, ಏನು ಕಾರಣ?”
ಆ ಗುಂಪಿನಿಂದ ಒಂದು ದನಿ ಹೊರಬಂದು ಹೇಳುತ್ತದೆ. “ಮರಗಳು ನಿಂತಲ್ಲೇ ದೃಢವಾಗಿ ನಿಂತಿರುತ್ತವೆ. ಅವು ಬಾಗುವುದಿಲ್ಲ. ಹಾಗಾಗಿ ಅವು ತಮ್ಮ ಸ್ಥಾನವನ್ನು ಕಳೆದುಕೊಳ್ಳುತ್ತವೆ. ಆದರೆ ಬೆತ್ತ ಹಾಗಲ್ಲ. ಪ್ರವಾಹದ ವೇಗ ಕಂಡಾಗ ಅದು ಬಾಗುತ್ತದೆ. ಪ್ರವಾಹ ಹರಿದು ಹೋದ ನಂತರ ಮತ್ತೆ ಎದ್ದು ನಿಲ್ಲುತ್ತದೆ. ಅದಕ್ಕೆ ಸಮಯ ಮತ್ತು ಸಂದರ್ಭಗಳ ಅರಿವಿದೆ. ಬಾಗಬೇಕಾದಾಗ ಬಾಗುವುದು ಅದರ ಸರಳತೆ. ಅದಕ್ಕೆ ಅಹಂಕಾರವಿಲ್ಲ.

ಬೆತ್ತ ಮಾತ್ರವಲ್ಲ, ಗಿಡ, ಪೊದೆ, ಪೈರುಗಳೂ ಹಾಗೆಯೇ. ಶಕ್ತಿಶಾಲಿಯಾದ ವಿರೋಧಿಯ ಪ್ರಭಾವವನ್ನು ಮೊದಲು ಸಹಿಸದಿದ್ದರೆ ಸೋಲು ನಿಶ್ಚಿತ. ತನ್ನ ವಿರೋಧಿಯ ಬಲಾಬಲಗಳನ್ನು ತಿಳಿದು ಕೆಲಸ ಮಾಡುವವರಿಗೆ ಸೋಲಿಲ್ಲ.
ಯಾರಿಗೂ ಬಾಗದೆ ಇರುವುದು ದೊಡ್ಡಸ್ತಿಕೆಯಲ್ಲ. ಬಾಗುವುದು ಸೋಲೂ ಅಲ್ಲ. ಪ್ರವಾಹ ಬದುಕನ್ನೇ ನಾಶ ಮಾಡಲು ಬಂದಾಗ ಎದುರಿಸಿ ನಿಲ್ಲುವುದು ಸರಿಯೇ. ಆದರೆ ಕೆಲವೊಮ್ಮೆ ಬಗ್ಗಿ ನಿಂತರೂ ಸಾಕು, ಉಳಿದುಕೊಳ್ಳಬಹುದು. ಅಂತಹ ಸಂದರ್ಭಗಳಲ್ಲಿ ಅಭಿಮಾನದ ಭ್ರಮೆಯಲ್ಲಿ ಬಂಡೆಗೆ ತಲೆ ಗುದ್ದಿಕೊಳ್ಳಬಾರದು.

ಅಂತಹ ಸನ್ನಿವೇಶದಲ್ಲಿ ಬಲಿಷ್ಠವಾದ ಮರವಾಗಿರುವುದಕ್ಕಿಂತ, ಬಿದಿರಿನಂತಿರುವುದೇ ಕ್ಷೇಮ.
