ತವರು ಮನೆ calling….. ಅಂತ ಇದ್ದ ಬೇಸಿಗೆ ರಜೆ ಮುಗಿದೇ ಹೋಯಿತೆ?

ನಾವೆಲ್ಲಾ ಶಾಲೆಯಲ್ಲಿ ಓದುತ್ತಿದ್ದಾಗ ಶಾಲೆಯ ಬೇಸಿಗೆಯ ರಜಾ ದಿನಗಳು ನಮಗೆ ಮಾತ್ರ ಸಂಭ್ರಮವಲ್ಲ ನಮ್ಮ ತಲೆಮಾರಿನ ಬಹುಷಹ ತಾಯಂದರಿಗೆ ನಮಗಿಂತ ಸಂತೋಷ, ಸಂಭ್ರಮ, ಸಡಗರ . ವರ್ಷಗಳಿಂದ ಕಾಯುತ್ತಿದ್ದ ಸುದೀರ್ಘ ರಜೆಯ ದಿನಗಳು ಬಂದವು ಎಂದು , ಏಕೆಂದರೆ ಬೇಸಿಗೆಯ ರಜೆ ಮಕ್ಕಳಿಗೆ ಶಾಲೆಯ ಕಲಿಕೆ, ಶಿಸ್ತು, ಅಭ್ಯಾಸಗಳಿಂದ ಅಲ್ಪ ವಿರಾಮದ ಸಂತೋಷದ ದಿನಗಳಾದರೆ ತಾಯಂದಿರಗೆ ಆ ಎರಡು ತಿಂಗಳು “ ತವರು ಮನೆ calling…..” !!!
ತಮ್ಮ ದಿನ ನಿತ್ಯದ ಜಂಜಾಟಗಳ ನಡುವೆ ಒಂದೋ ಎರಡೋ ತಿಂಗಳು ಅಮ್ಮನ ಮನೆಯಲ್ಲಿ ಈ ಅಮ್ಮನೇ ಮಗಳಾಗಿ ಕಾಲ ಕಳೆಯುತ್ತಿದ್ದಳು. ತನ್ನ ಮಕ್ಕಳಿಗೆ ತಾನು ಓದಿದ ಶಾಲೆ, ತನ್ನ ತವರಿನ ಸಂಬಂಧ, ತನ್ನ ಬಾಲ್ಯ ಸ್ನೇಹಿತರು, ತನ್ನ ಊರು , ಅಲ್ಲಿಯ ದೇವಸ್ಥಾನ, ತೋಟ, ಗದ್ದೆ ಎಲ್ಲವನ್ನು ತನ್ನದು ತನ್ನದು ಎಂದು ಪರಿಚಯಿಸುತ್ತಾ ತನ್ನದನ್ನು ಹೆಮ್ಮೆಯಿಂದ ಹೇಳುತ್ತಿದ್ದಳು. ಅಮ್ಮನ ಮನೆಯಲ್ಲಿ ಬೇಸಿಗೆ ಕಳೆಯಲು ತನ್ನಂತಯೇ ಬರುತ್ತಿದ್ದ ತನ್ನ ಅಕ್ಕ ತಂಗಿಯರು, ಅತ್ತಿಗೆ ನಾದನಿಯರು, ಚಿಕ್ಕಪ್ಪ , ದೊಡ್ಡಪ್ಪ , ಮಾವನ ಮಕ್ಕಳು ಎಲ್ಲರೊಂದಿಗೆ ತನ್ನ ಮಕ್ಕಳನ್ನು ಅವರ ಮಕ್ಕಳನ್ನು ಸೇರಿಸಿ ಆಡಿಸುತ್ತಿದ್ದರು, ಆಟವಾಡುತ್ತಿದ್ದರು. ಮೊಬೈಲ್ , ಟಿ ವಿ ಗಳ ಹಾವಳಿ ಜಾಸ್ತಿ ಇಲ್ಲದ ಸುಂದರ ಕಾಲ ಘಟ್ಟವದು ಹಾವು ಏಣಿ, ಕುಂಟ ಬಿಲ್ಲೆ, ಚೌಕಾ ಬಾರ, ಕೇರಂ, ಕಣ್ಣಾಮುಚ್ಚಾಲೆ, ಮರ ಕೋತಿ ಅಬ್ಬಾ ಒಂದಾ ಎರಡಾ ಎಷ್ಟೊಂದು ಆಟಗಳನ್ನು ಆಟ ವಾಡುತ್ತಿದ್ದೆವು. ಆ ಆಟಗಳು ಇಂದಿಂಗೂ ನಮ್ಮ ಸಂಬಂಧವನ್ನು ಗಟ್ಟಿಗೊಳಿಸಿವೆ ನಮ್ಮಲ್ಲಿ ಬಾಲ್ಯದ ನೆನಪುಗಳನ್ನು ಪ್ರತಿ ಬೇಸಿಗೆಯಲ್ಲೂ ನಮ್ಮ ಮುಂದೆ ತಂದು ನಿಲ್ಲಿಸುತ್ತಿದೆ. ಆದರೆ ಅದೇ ಕ್ಷಣ ಮರುಕ ಹುಟ್ಟುತ್ತಿದೆ ನಾವು ಕಳೆದ ಸುಂದರ ಬೇಸಿಗೆ ರಜೆ ನಮ್ಮ ಮಕ್ಕಳಿಗೆ ಇಲ್ಲವಲ್ಲವೆಂದು.

ತವರು ಮನೆ calling… ಅಂತ ಇದ್ದಾ ಬೇಸಿಗೆ ರಜೆಗಳು ಇಂದು ನಮ್ಮ ಕೆಲಸದ ಒತ್ತಡ, ಕೆಲಸದ ಶೈಲಿ, ಕುಟುಂಬದ ಇತರೆ ಜವಬ್ಧಾರಿಗಳು ಈ ಬೇಸಿಗೆ ರಜವನ್ನು ಮಕ್ಕಳು ಅಜ್ಜಿ ಮನೆಯಲ್ಲಿ ಕಳೆಯುವುದನ್ನು ತಪ್ಪಿಸುವ ಜೊತೆಗೆ ತಾಯಂದಿರೂ ಅಮ್ಮನ ಮನೆಗೆ ಹೋಗುವುದನ್ನೂ ತಪ್ಪಿಸುತ್ತಿದೆ ಎಂದರೆ ತಪ್ಪಿಲ್ಲ ಅನ್ನಿಸುತ್ತದೆ. ಬೇಸಿಗೆ ರಜೆ ಆರಂಭಕ್ಕೂ ಮೊದಲೆ ಅನಿವಾರ್ಯಕ್ಕೋ, ಅವಶ್ಯಕತೆಗೋ ಒಂದೊಂದು ಬೇಸಿಗೆ ಶಿಬಿರದಲ್ಲಿ ಮಕ್ಕಳನ್ನು ಸೇರಿಸಲು ಸಿದ್ದ ಮಾಡಿಕೊಳ್ಳುತ್ತೇವೆ. ಮಕ್ಕಳಿಗೆ ಹೊಸದನ್ನು ಬೇಸಿಗೆ ಶಿಬಿರದಲ್ಲಿ ಕಲಿಸುವ ಉತ್ಸಾಹ ಶೇಕಡಾ ಐವತ್ತು ಮಂದಿ ಪೋಷಕರಿಗಿದ್ದರೆ ಉಳಿದ ಶೇಕಡಾ ಐವತ್ತು ಪೋಷಕರಿಗೆ ತಾವು ಕೆಲಸದಿಂದ ಮನೆಗೆ ಬರುವ ತನಕ ಆ ಮಕ್ಕಳು ಬೇರೊಲ್ಲೋ ಸುರಕ್ಷಿತವಾಗಿ ಇರಬೇಕು, ಮನೆಯಲ್ಲಿ ಟಿ ವಿ ಮುಂದೆ ಕೂರುವ ಬದಲು , ಮೊಬೈಲ್ ನೋಡುವ ಬದಲು ಒಂದಷ್ಟು ಕಾಲ ಮತ್ತೆಲ್ಲೋ ಉಪಯುಕ್ತವಾಗಿ ಸಮಯ ಕಳೆಯಲಿ ಎಂದು ಬೇಸಿಗೆ ಶಿಬಿರ ಆಯ್ಕೆ ಮಾಡುತ್ತಾರೆ. ನಮ್ಮ ಕಾರ್ಪೋರೇಟ್ ಜೀವನ , ಟಾರ್ಗೆಟ್ ಆದರಿತ ಕೆಲಸಗಳು ದಿನ ನಿತ್ಯ ಮಕ್ಕಳಿಗಾಗಿ ನಾವು ಸಮಯ ನೀಡುವುದನ್ನು ಕಡಿಮೆ ಮಾಡಿದೆ ಆದರೆ ಬೇಸಿಗೆ ರಜಾ ದಂತ ಸುದೀರ್ಘ ಎರಡು ತಿಂಗಳೂ ಸಹ ಅದೆಷ್ಟೋ ಪೋಷಕರಿಗೆ ತಮ್ಮ ಮಕ್ಕಳೊಂದಿಗೆ ಒಂದು ದಿನದ ಪ್ರವಾಸ, ಅಜ್ಜಿ ತಾತ ನ ಮನೆ ಬೇಟಿ, ಅವರೊಂದಿಗೆ ಆಟ ಆಡಲು ಸಮಯ ಸಿಗಲಿಲ್ಲ ಎಂದರೆ ನಮ್ಮ ಕೆಲಸಗಳೂ ಸಹಾ ನಮ್ಮ ಮಕ್ಕಳ ಭಾವನೆಗಳ ಮೇಲೆ ಎಂತಹ ದೌರ್ಜನ್ಯ ಮಾಡುತ್ತಿವೆ ಎಂದು ನಾವು ಯೋಚಿಸುವುದೂ ಇಲ್ಲ.
ಇಷ್ಟೆಲ್ಲಾ ಒತ್ತಡದ ನಡುವೆಯೂ ಮಕ್ಕಳ ಜೊತೆ ಚಲನ ಚಿತ್ರ ವೀಕ್ಷಣೆ, ಕ್ರಿಕೇಟ್ , ಬ್ಯಾಡ್ ಮಿಟನ್ , ವಾಲಿ ಬಾಲ್ , ಚೌಕಾ ಬಾರ, ಹಾವು ಏಣಿ, ಅಳಿಗುಳಿ ಮನೆ ಆಟ, ಬೇರೆ ರೀತಿಯ ಆಟಗಳು, ಮಕ್ಕಳಿಗೆ ಕಥೆಗಳನ್ನು ಹೇಳುತ್ತಾ, ಒಂದಷ್ಟು ದಿನದ ಪ್ರವಾಸ ಕೈಗೊಂಡ ಪೋಷಕರು ಇದ್ದಾರೆ. ನಮ್ಮ ಮಕ್ಕಳೊಂದಿಗೆ ಅವರಿಗೆ ಯಾವುದೇ ಒತ್ತಡ ವಿಲ್ಲದ ಸಮಯದಲ್ಲಿ ನಮ್ಮ ಎಲ್ಲಾ ಕೆಲಸದ ಒತ್ತಡಗಳನ್ನು ಬದಿಗೊತ್ತಿ ಅವರೊಂದಿಗೆ ಕಳೆಯುವ ಅದ್ಭುತ ಸಮಯವೇ ನಮ್ಮ ಜೆನೆರೇಶನ್ ನ ಗೋಲ್ಡನ್ ಟೈಮ್.. ಅವರೊಂದಿಗೆ ಸುಂದರವಾದ ಸಮಯವನ್ನು ಕಳೆಯದೇ ಬೇರೇನೇ ನಾವು ನಮ್ಮ ಮಕ್ಕಳಿಗೆ ಮಾಡಿದರು ಅದೊಂದು ವ್ಯವಸ್ಥಿತ ವ್ಯವಹಾರವಷ್ಟೆ ಎಂಬುದು ನನ್ನ ಭಾವನೆ.
ಈ ಬೇಸಿಗೆಯ ರಜೆಯಲ್ಲಿ ನನ್ನ ಪತ್ನಿ, ನನ್ನ ಸ್ನೇಹಿತೆಯರು, ನನ್ನ ಮಹಿಳಾ ಸಹೋದ್ಯೋಗಿ ಮಾತೆಯರು, ಬೇಸಿಗೆಯ ಶಿಬಿರದಲ್ಲಿ ಮಗುವನ್ನು ಬಿಟ್ಟು ಹೋಗುತ್ತಿದ್ದ ತಾಯಂದಿರನ್ನು ನೋಡಿದಾಗ, ಆಫಿಸ್ ನ ಮೀಟಿಂಗ್ ಲಿ ಮಹಿಳಾ ಸಹೋದ್ಯೋಗಿಗಳು “Its holiday for my kid, Sorry for background noise, I will ask them to keep silent.” ಎಂದು ಕೇಳಿದಾಗ ನನ್ನ ಮನಸಿನಲ್ಲಿ ಮೂಡುತ್ತಿದ್ದ ಪ್ರಶ್ನೆ ಈ ಜೆನೆರೆಶನ್ ನ ಅಮ್ಮಂದಿರು ತಮ್ಮ ಮಕ್ಕಳೊಡನೆ ತಮ್ಮ ತವರು ಮನೆಗೆ ಹೋಗುವುದನ್ನು ಕಳೆದು ಕೊಂಡರಲ್ಲ ಎಂದು. ನಮ್ಮ ಬದುಕಿನ ಒತ್ತಡಗಳು ನಮಗೆ ತಿಳಿಯದಂತೆ ನಮ್ಮಿಂದ ಎಷ್ಟನ್ನು ಕಸಿಯುತ್ತಿದೆ ಎಂದು ತಿಳಿಯುತ್ತಿಲ್ಲ ನಾವು. ಇಲ್ಲಿ ತಾಯಿ ಮಾತ್ರ ತನ್ನ ತವರು ಮನೆಯನ್ನು ಮಿಸ್ ಮಾಡಿಕೊಳ್ಳುವುದಲ್ಲ ಅತ್ತಾ ತನ್ನ ಮಗಳು, ಮೊಮಕ್ಕಳೊಂದಿಗೆ ಬೇಸಿಗೆ ರಜೆಯಲ್ಲಿ ಒಂದಷ್ಟು ಕಾಲ ಕಳೆಯ ಬಹುದೆಂದು ಹಂಬಲಿಸುವ ಆ ವೃದ್ಧ ಮನಸ್ಸುಗಳನ್ನೂ ಸಹ ಅರಿಯಲು ನಾವು ವಿಫಲರಾದೆವು. ಅರ್ಥ ಆದರೂ ಏನೂ ಮಾಡಾಲಾಗದೆ ವಾರಾಂತ್ಯ ಬೇಟಿ ನೀಡಿ ಸೋಮವಾರ ಬೆಳಗ್ಗೆ ದುಡಿಮೆಗೆ ದುಡೂವ ಮನಸನ್ನು ಕೇಳುತ್ತಾ ಆಲ್ ರೈಟ್ ಮುಂದೆ ಹೋಗೋಣ ಎಂದು ನೆಡೆಯುತ್ತೇವೆ. ಆದರೆ ಒಂದಂತೂ ಸತ್ಯ ಇನ್ನೂ ಮುಂದೆ ತವರು ಮನೆ calling…… ಎಂಬುವ ಸುಂದರ ಬೇಸಿಗೆಯ ರಜೆ ದಿನಗಳ ಕಾಲ ಮುಗಿದೇ ಹೋಗುತ್ತದೆ ಅನ್ನಿಸುತ್ತದೆ.

ಬೇಸಿಗೆಯ ರಜೆ ಕಳೆದಿದೆ ಜೂನ್ ಬಂದಿದೆ ಮೊದಲ ದಿನ ಮಕ್ಕಳಿಗೆ ತಿಂಡಿ, ಊಟದ ಡಬ್ಬಿ , ಸಮವಸ್ತ್ರ , ಶೂ ಸಿದ್ದ ಮಾಡಿ ಬಸ್ ಹತ್ತಿಸುವಾಗ ಮನಸ್ಸು ಅತ್ಯಂತ ದುಃಖದಿಂದ ಹೇಳುತ್ತದೆ ಛೇ….. ಬೇಸಿಗೆ ರಜೆ ಮುಗಿದೇ ಹೋಯಿತು.. ಮತ್ತಷ್ಟು ದಿನ ನಮ್ಮ ಮಕ್ಕಳೊಂದಿಗೆ ಸಮಯ ಕಳೆಯ ಬೇಕಿತ್ತು ಎಂದು…. ಮಗನ ಡಬ್ಬಿಯೊಂದಿಗೆ ತನ್ನ ವ್ಯಾನಿಟಿ ಬ್ಯಾಗಿಗೆ ಮತ್ತೊಂದು ಡಬ್ಬಿಯನ್ನು ಹಾಕಿ ಕೊಂಡು ಹೊರಡುವ ತಾಯಂದರಿಗೆ ಈ ಲೇಖನ ಸಮರ್ಪಣೆ. ಬೇಸಿಗೆ ರಜೆಯಲ್ಲಿ ಅಮ್ಮನ ಮನೆಯಲ್ಲಿ ಮಗಳಾಗಿ ಕಾಲ ಕಳೆಯುವ ಸಮಯ ಅತ್ಯಂತ ಸುಂದರವಾದುದು. ಒಬ್ಬ ಮದ್ಯ ವಯಸ್ಕ ಅಮ್ಮನಿಗೆ ಅದೊಂದು ಎನರ್ಜಿ ರಿಫ್ರೆಶ್ ಮೆಂಟ್ !! ಅಮ್ಮನೇ ಮೊಬೈಲ್ ಗೆ ಫೋನ್ ಮಾಡಿದರು ಅಮ್ಮ ಆಫಿಸ್ ಲಿ ಇದಿನಿ, ಅಮ್ಮ ಮೀಟಿಂಗ್ ಲಿ ಇದಿನಿ, ಅಮ್ಮ ಮಗುಗೇ ಓದಿಸ್ತಾ ಇದಿನಿ, ಅಮ್ಮ ಅಡುಗೆ ಮಾಡ್ತಾ ಇದಿನಿ ಆಮೇಲೆ ಫೋನ್ ಮಾಡ್ತೀನಿ ಅಂತಾ ಹೇಳುತ್ತಾ ನನ್ನ ಸಮ ವಯಸ್ಸಿನ ಮಾತೆಯರು ಇದ್ದಾರೆ. ಅವರೆಲ್ಲರಿಗೂ ಮುಂದಿನ ಬೇಸಿಗೆ ರಜೆ ನಿಜವಾಗಲೂ ತವರು ಮನೆ calling ಆಗಲಿ.
