ಕೊರಗು

ನನ್ನಪ್ಪ ಏಕೋ ಎಲ್ಲದರಲ್ಲೂ
ಅಮ್ಮನನ್ನೇ ಮುಂದೆ ಬಿಟ್ಟ,
ತಾನು ಹಿಂದೆಯೇ ಉಳಿದುಬಿಟ್ಟ…..
ಪ್ರೀತಿ, ಮಮತೆ, ಕಾಳಜಿ, ವಾತ್ಸಲ್ಯ ತೋರುವುದರಲ್ಲಿ ನನ್ನ ಅಪ್ಪ
ಯಾಕೋ ಅಮ್ಮನಿಗಿಂತ ಹಿಂದೆ ಉಳಿದುಬಿಟ್ಟ…..
ನನ್ನಪ್ಪ ಎಲ್ಲದರಲ್ಲೂ ಅಮ್ಮನನ್ನೇ ಮುಂದೆ ಬಿಟ್ಟ……
ನಾ ಅಮ್ಮನಾದರೂ ನನ್ನ ಅಪ್ಪನ ಕಾಳಜಿ, ವಾತ್ಸಲ್ಯಕ್ಕಾಗಿ, ಪ್ರೀತಿಗಾಗಿ
ಸದಾ ನಾ ತವಕಿಸುವಂತೆ ಮಾಡಿಬಿಟ್ಟ……
ನನ್ನಪ್ಪ ಏಕೋ ಎಲ್ಲದರಲ್ಲೂ ಅಮ್ಮನನ್ನೇ ಮುಂದೆ ಬಿಟ್ಟ….
ಅಪ್ಪಂದಿರ ದಿನ ಎಲ್ಲಾ ಮಕ್ಕಳು ಅಪ್ಪನನ್ನು ಹೀರೊ ಅನ್ನುವಾಗ, ನನಗೆ ಮಾತ್ರ
ಏಕೆ ಹೀಗೆ ಅನ್ನುವ ಪ್ರಶ್ನೆ ಮನದಿ ಹಾಗೆಯೇ ಉಳಿಸಿಬಿಟ್ಟ….
ನನ್ನಪ್ಪ ಏಕೋ ಎಲ್ಲದರಲ್ಲೂ ಅಮ್ಮನನ್ನೇ ಮುಂದೆ ಬಿಟ್ಟ.
ಯಾರಾದರೂ ಅಲ್ಪಸ್ವಲ್ಪ ಪ್ರೀತಿ, ಮಮತೆ, ಕಾಳಜಿ ತೋರಿದಾಕ್ಷಣ
ಅವರಲಿ ನನ್ನಪ್ಪನನ್ನೇ ನಾ ಕಾಣುವಂತೆ ಮಾಡಿ,ಅವನು ಮಾತ್ರ ಹೊರಟುಬಿಟ್ಟ…..
ನನ್ನಪ್ಪ ಯಾಕೋ ಎಲ್ಲದರಲ್ಲೂ ಅಮ್ಮನನ್ನೇ ಮುಂದೆ ಬಿಟ್ಟ.
ಸಾಯುವವರೆಗೂ ನನ್ನಪ್ಪ ತೋರದ ಪ್ರೀತಿಗಾಗಿ ನಾ ಕಾತರಿಸುತ ಸದಾ ಕೊರಗುವಂತೆ ಮಾಡಿ,
ತಾನು ನೆಮ್ಮದಿಯಾಗಿ ಚಿತೆಯೇರಿಬಿಟ್ಟ…
ನನ್ನಪ್ಪ ಏಕೋ ಅಮ್ಮ ಒಬ್ಬಳನ್ನೇ ಬಿಟ್ಟು ಹೊರಟುಬಿಟ್ಟ.
ಅಪ್ಪಂದಿರ ದಿನಾಚರಣೆಯಂದು ನನ್ನದೊಂದು ಕೊರಗು……
